ಕೊಪ್ಪಳ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yadiyurappa) ರಾಜ್ಯ ಪ್ರವಾಸ ಕೈಗೊಂಡಿರುವ ವಿಚಾರದ ಕುರಿತು ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi), ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಅಥವಾ ಪಕ್ಷ ಭದ್ರ ಮಾಡೋಕೆ ರಾಜ್ಯ ಪ್ರವಾಸ ಮಾಡುತ್ತಿದ್ದಾರಾ ಅದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು.
ಸದ್ಯ ಈ ಹೇಳಿಕೆಗೆ ಕೌಂಟರ್ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಶಾಸಕ ರಮೇಶ ವಿರುದ್ಧ ಕಿಡಿಕಾರಿದ್ದಾರೆ.
ರಮೇಶ್ ಜಾರಕಿಹೊಳಿ ನಾಲಿಗೆ ಬಿಗಿ ಹಿಡಿದುಕೊಂಡು ಮಾತಾಡಲಿ
ಕೊಪ್ಪಳ ನಗರದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ಅವರು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅವರಿಗೆ ಸಮಸ್ಯೆ ಇದ್ರೆ ಹೈಕಮಾಂಡ್ ಜೊತೆ ಮಾತನಾಡಲಿ. ಹೀಗೆ ಬಹಿರಂಗವಾಗಿ ಮಾತನಾಡುವದು ಸರಿಯಲ್ಲ ಎಂದು ಟಾಂಗ್ ನೀಡಿದರು.
ರಮೇಶ್ ಬಗ್ಗೆ ಚರ್ಚೆ ಬೇಡ
ಯಾರ ವೈಪಲ್ಯ ಅಂತ ಅವರ ಕ್ಷೇತ್ರದ ಜನ ಹೇಳ್ತಾರೆ. ಹೀಗೆ ಮಾತನಾಡಿದ್ರೆ ಜನರು ಸುಮ್ಮನೆ ಬಿಡೋದಿಲ್ಲ, ರಮೇಶ್ ಜಾರಕಿಹೊಳಿ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವು ಸರಿಹೋಗುತ್ತೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ರಮೇಶ್ ಜಾರಕಿಹೊಳಿ ಹೇಳಿದ್ದೇನು?
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸಲು ನಾವು ಹೋರಾಟ ಮಾಡಿದ್ದು ನಿಜ. ಈ ಬಗ್ಗೆ ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಯಡಿಯೂರಪ್ಪರವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಆದರೆ ಯಾಕೆ ಪ್ರವಾಸ ಮಾಡುತ್ತಿದ್ದಾರೆ ಅದನ್ನ ಸ್ಪಷ್ಟಪಡಿಸಬೇಕು.
ಮಗನ ಸ್ಥಾನ ಭದ್ರಪಡಿಸಲು ಬಿಎಸ್‌ವೈ ಪ್ರವಾಸ ಎಂದ ಸಾಹುಕಾರ್!
ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಪಕ್ಷ ಭದ್ರ ಮಾಡೋಕೆ ಮಾಡ್ತಿದಾರಾ ಅದನ್ನು ಸ್ಪಷ್ಟಪಡಿಸಬೇಕು ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ, ವಯಸ್ಸಾಗಿದೆ ನಿಮಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ದಯವಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಬೇಡಿ. ವಿಜಯೇಂದ್ರ ಬೆನ್ನು ಹತ್ತಿದ್ರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ಫೇಲಾದ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಹಕಾರ ಕೊಡಿ ಎಂದು ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದರು.