ಸಂಚಾರ ಪೊಲೀಸನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 16 ವರ್ಷದ ಬಾಲಕ ಮತ್ತು ಆತನ ತಾಯಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಹುಡುಗಿಯ ಹೇಳಿಕೆಯ ಆಧಾರದ ಮೇಲೆ, ಮೈಲಾಪುರ ಮಹಿಳಾ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪೊಲೀಸ್ ಅಧಿಕಾರಿ, ಬಾಲಕಿಯ ಪ್ರಿಯಕರ ಮತ್ತು ಆತನ ತಾಯಿಯನ್ನು ಚೆನ್ನೈನಲ್ಲಿ ಬಂಧಿಸಿ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ ಏನು ?
ರಾಜಸ್ಥಾನ ಮೂಲದ 13 ವರ್ಷದ ಬಾಲಕಿಯೊಬ್ಬಳು 16ರ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ವಿಚಾರ ತಿಳಿದ ಮನೆಯವರು ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದಾರೆ. ಮದುವೆ ಮಾಡುತ್ತಾರೆಂಬ ಭಯದಿಂದ ಬಾಲಕಿ ಮನೆ ಬಿಟ್ಟು ಪ್ರಿಯಕರನ ಮನೆ ಸೇರಿದ್ದಾಳೆ. ಆದರೆ ಬಾಲಕಿಯನ್ನು ಪ್ರಿಯಕರನ ತಾಯಿ ಹೊರದಬ್ಬಿದ್ದಾಳೆ. ಹೀಗೆ ಹೊರಬಿದ್ದ ಬಾಲಕಿ ನಡುರಸ್ತೆಯಲ್ಲಿ ಮಲಗಿದ್ದಾಳೆ. ಇದನ್ನು ಕಂಡ ಪೊಲೀಸ್ ಆಕೆಯನ್ನ ಸುರಕ್ಷಿತವಾಗಿ ಕರೆದೊಯ್ಯುತ್ತೇನೆ ಎಂದು ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಂಧಿತ ಪೊಲೀಸ್ ರಾಮನ್, ಸಂಚಾರ ಪೊಲೀಸ್ ನಿರೀಕ್ಷಕರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜನವರಿ 25 ರಂದು, ಚೆನ್ನೈನ ಮೈಲಾಪುರದ ಚರ್ಚ್ನ ಹೊರಗೆ ಪ್ಲಾಟ್ಫಾರ್ಮ್ನಲ್ಲಿ ಮಲಗಿದ್ದ ಬಾಲಕಿಯನ್ನು ಕಂಡಿದ್ದಾನೆ.ಮದುವೆ ಭಯದಿಂದ ತನ್ನ ತಾಯಿಯ ಬಳಿ ಕರೆದೊಯ್ಯದಂತೆ ಪೊಲೀಸ್ಗೆ ಬಾಲಕಿ ಮನವಿ ಮಾಡಿದ್ದಾಳೆ. ಇದರಂತೆ ಫೋರ್ ಶೋರ್ ಎಸ್ಟೇಟ್ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಭರವಸೆಯನ್ನು ನೀಡಿ ಕರೆದೊಯ್ದಿದ್ದಾನೆ
ಪೊಲೀಸ್ ವಾಹನವನ್ನು ಹತ್ತಿರದಲ್ಲೇ ನಿಲ್ಲಿಸಿ ಬಾಲಕಿಯನ್ನು ಪೊಲೀಸ್ ಬೂತ್ನಲ್ಲಿ ಸ್ವಲ್ಪ ಸಮಯ ಕಾಯುವಂತೆ ಹೇಳಿ, ನಂತರ ರಾಮನ್ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಬಾಲಕಿ ಕಿರುಚುತ್ತಿದ್ದಂತೆ ಕಿರಾತಕ ಎಸ್ಕೇಪ್ ಆಗಿದ್ದಾನೆ.
ಇದೀಗ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್ ರಾಮನ್, ಬಾಲಕಿಯ ಪ್ರಿಯಕರ ಮತ್ತು ಆತನ ತಾಯಿ ಪೊಲೀಸರ ಅತಿಥಿಯಾಗಿದ್ದಾರೆ.