Home ರಾಜ್ಯ ವಾರ್ತೆ ರಾಮೇಶ್ವರಂ ಕೆಫೆ ಸ್ಫೋಟ; ಬಿಜೆಪಿ ಕಾರ್ಯಕರ್ತನ ವಿಚಾರಣೆ ವೇಳೆ ಹೊರಬಿದ್ದ ಸತ್ಯವೇನು? ಈತನಿಗೇನು ಸಂಬಂಧ?

ರಾಮೇಶ್ವರಂ ಕೆಫೆ ಸ್ಫೋಟ; ಬಿಜೆಪಿ ಕಾರ್ಯಕರ್ತನ ವಿಚಾರಣೆ ವೇಳೆ ಹೊರಬಿದ್ದ ಸತ್ಯವೇನು? ಈತನಿಗೇನು ಸಂಬಂಧ?

0

ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಉಗ್ರರ ಜಾಡನ್ನ ಹಿಡಿದು ಎನ್‌ಐಎ ಹುಡುಕಾಟ ನಡೆಸಿದೆ. ಬಿಲದಲ್ಲಿ ಅಡಗಿ ಕೂತಿರೋ ನರರಕ್ಕಸರ ಹೆಡೆಮುರಿ ಕಟ್ಟಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಬಾಂಬ್ ಸ್ಫೋಟದ ರೂವಾರಿಗಳು ಮಲೆನಾಡಿನ ಮೂಲದವರು ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಜೊತೆಗೆ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಹಲವರ ವಿಚಾರಣೆಯೂ ನಡೀತಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್‌ ಕೇಸ್‌ ನಡೆದು ದಿನಗಳೇ ಉರುಳುತ್ತಿವೆ. ಆದ್ರೆ, ಬಾಂಬ್ ಹಾಕಿ ಎಸ್ಕೇಪ್ ಆಗಿದ್ದ ಉಗ್ರನನ್ನ ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸ್ತಿರೋ ಎನ್‌ಐಎ ಉಗ್ರ ಜಾಡನ್ನ ಹಿಡಿದು ಹೊರೆಟಿದೆ. ನರ ರಾಕ್ಷಸರ ಬಂಧನಕ್ಕೆ ಬಲೆ ಬೀಸಿದೆ.

ತೀರ್ಥಹಳ್ಳಿ ಮೂಲದ ಇಬ್ಬರಿಗೆ ಎನ್‌ಐಎ ವಿಚಾರಣೆ

10 ದಿನಗಳ ಹಿಂದೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಎನ್ಐಎ ದಾಳಿ ನಡೆಸಿತ್ತು. ತೀರ್ಥಹಳ್ಳಿಯ ಹಲವು ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನ ವಶಪಡಿಸಿಕೊಂಡಿತ್ತು. ಅಂದ್ಹಾಗೆ ಬಾಂಬ್ ಇಟ್ಟು ಎಸ್ಕೇಪ್ ಆಗಿರೋ ಮುಸಾವೀರ್, ಈ ದುಷ್ಕೃತ್ಯಕ್ಕೆ ರೂಪುರೇಶೆ ಸಿದ್ದಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ತೀರ್ಥಹಳ್ಳಿಯವರು. ಹೀಗಾಗಿ ತೀರ್ಥಹಳ್ಳಿಯ ಇಬ್ಬರನ್ನ ಎನ್‌ಐಎ ವಿಚಾರಣೆ ಮಾಡಿತ್ತು.

ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್ ಜೊತೆ ಸಂಪರ್ಕ

ತೀರ್ಥಹಳ್ಳಿ ಮೂಲದ ಇಬ್ಬರನ್ನ ಎನ್‌ಐಎ ವಿಚಾರಣೆ ನಡೆಸಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಎಂಬುವವನ ವಿಚಾರಣೆ ಮಾಡಲಾಗಿದೆ. ಜೊತೆಗೆ ಮೊಬೈಲ್ ಅಂಗಡಿ ಮಾಲೀಕನನ್ನೂ ಎನ್‌ಐಎ ವಿಚಾರಣೆ ನಡೆಸಿದೆ. ಇಬ್ಬರನ್ನೂ ಪ್ರಕರಣ ಸಾಕ್ಷಿಗಳನ್ನಾಗಿ ಮಾಡಲು ವಿಚಾರಣೆ ಮಾಡಲಾಗಿದೆ.. ಅಂದ್ಹಾಗೆ ಹಳೆಯ ಮೊಬೈಲ್ ಒಂದನ್ನ ಸಾಯಿ ಪ್ರಸಾದ್ ಮಾರಾಟ ಮಾಡಿದ್ನಂತೆ. ಈ ಮೊಬೈಲ್‌ನ ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಜಾಮಿಲ್‌ಗೆ ಮಾರಾಟ ಮಾಡಿದ್ದಾನೆ. ಇದೇ ಮೊಬೈಲ್‌ನಿಂದ ಮುಜಾಮಿಲ್ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್ ಜೊತೆ ಸಂಪರ್ಕ ಹೊಂದಿದ್ದ. ಮುಜಾಮಿಲ್ ಬಂಧನದ ವೇಳೆ ಎನ್‌ಐಎ ಈ ಮೊಬೈಲ್‌ನ ವಶಕ್ಕೆ ಪಡೆದಿತ್ತು. ಮೊಬೈಲ್ ಜಾಡು ಹಿಡಿದಾಗ ಸಾಯಿ ಪ್ರಸಾದ್‌ದು ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಇಬ್ಬರನ್ನೂ ಸಾಕ್ಷಿ ಮಾಡಲು ಎನ್‌ಐಎ ವಿಚಾರಣೆಗೆ ಒಳಪಡಿಸಿದೆ.

ಈ ಹಿಂದೆ ಮೊಬೈಲ್ ಅಂಗಡಿಯ ಇಬ್ಬರು ಯುವಕರನ್ನ ಎನ್ಐಎ ತಂಡ ವಿಚಾರಣೆಗೆ ಒಳಪಡಿಸಿತ್ತು. ಆ ಹುಡುಗರ ಜೊತೆ ಬಿಜೆಪಿ ನಗರ ಘಟಕದ ಮುಖಂಡನ ಸಂಪರ್ಕ ಇರೋದ್ರಿಂದ ಆತನನ್ನೂ ವಿಚಾರಣೆಗೆ ಒಳಪಡಿಸಿತ್ತು.

ಇನ್ನೂ ದೇಶದ 18 ಕಡೆ ದಾಳಿ ಮಾಡಿ ಎನ್‌ಐಎ ಪರಿಶೀಲನೆ ಮಾಡಿದ್ದು, ಈಗಾಗಲೆ ಇಬ್ಬರು ಆರೋಪಿಗಳ ಸುಳಿವು ಕೊಟ್ಟವರಿಗೆ ತಲಾ 10 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಜೊತೆಗೆ ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸುತ್ತಿದೆ.

ಒಟ್ಟಾರೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್‌ ಮಾಡಿ ಇಡೀ ರಾಜ್ಯವನ್ನೇ ಆತಂಕಕ್ಕೆ ತಳ್ಳಿದ್ದ ಉಗ್ರನ ಬಂಧನಕ್ಕೆ ಎನ್‌ಐಎ ಮುಂದಾಗಿದೆ.. ಉಗ್ರನ ರಣಬೇಟೆಯಾಡಲು ಸಜ್ಜಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version