ವಿವೇಕವಾರ್ತೆ : ವ್ಯಕ್ತಿಯನ್ನು ಕೊಂದಿರುವ ದುಷ್ಕರ್ಮಿಗಳು ಬಳಿಕ ಗೋಣಿ ಚೀಲವೊಂದರಲ್ಲಿ ತುಂಬಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ.ಗ್ರಾಮದ ಸಮೀಪದ ಕೃಷ್ಣಾ ನದಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಕೃಷ್ಣಾ ನದಿಯಲ್ಲಿ ರಕ್ತದ ಕಲೆಯ ಮೂಟೆಯೊಂದು ತೇಲಾಡುತ್ತಿತ್ತು.ಇದನ್ನೂ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ನದಿಯಿಂದ ಮೂಟೆಯನ್ನು ಹೊರತೆಗೆದು ನೋಡಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯ ತಲೆ ಮತ್ತು ಮುಖದ ಮೇಲೆ ಗಾಯದ ಗುರುತುಗಳು ಇರುವುದು ಗೊತ್ತಾಗಿದೆ. ಅಪರಿಚಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಬಳಿಕ ಮೂಟೆಯಲ್ಲಿ ಕಟ್ಟಿ ನದಿಗೆ ಬಿಸಾಕಿ ಹೋಗಿದ್ದಾರೆ.
ಕೊಲೆಯಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಂದಾಜು 30-35 ವರ್ಷದ ವಯೋಮಾನದ ವ್ಯಕ್ತಿಯನ್ನು ಕೊಲೆ ಮಾಡಿ ನದಿಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಅಮರನಾಥ ರೆಡ್ಡಿ ಹಾಗೂ ಡಿವೈಎಸ್ಪಿ ಶಾಂತವೀರ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸಾವಳಗಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಶವದ ಕುರಿತು ಮಾಹಿತಿ ಇದ್ದವರು ಸಾವಳಗಿ ಠಾಣೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.