ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸೀರ್‌ಗೆ ಕಾನೂನು ಬಾಹಿರವಾಗಿ ನೆರವು ನೀಡುತ್ತಿದ್ದ ಜಾಲವನ್ನು ಎನ್‌ಐಎ (NIA) ಅಧಿಕಾರಿಗಳು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಎಎಸ್‌ಐ ಚಾಂದ್ ಪಾಷಾ, ಡಾ. ನಾಗರಾಜ್ ಮತ್ತು ಅನಿಸಾ ಫಾತಿಮಾ ಎಂಬ ಮೂವರು ಆರೋಪಿಗಳ ವಿರುದ್ಧ ತನಿಖಾ ಸಂಸ್ಥೆಯು ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ (Chargesheet) ಸಲ್ಲಿಕೆ ಮಾಡಿದೆ.
ಖಾಕಿ ಮತ್ತು ವೈದ್ಯಕೀಯ ವೃತ್ತಿಗೆ ಕಳಂಕ: ಬಯಲಾದ ಸ್ಫೋಟಕ ಸತ್ಯಗಳು
ಎನ್‌ಐಎ ಸಲ್ಲಿಕೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳು ಉಗ್ರರಿಗೆ ಯಾವ ರೀತಿ ಸಹಾಯ ಮಾಡುತ್ತಿದ್ದರು ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ:
-
ASI ಚಾಂದ್ ಪಾಷಾ: ಸಿಎಆರ್ (CAR) ವಿಭಾಗದಲ್ಲಿ ಎಎಸ್‌ಐ ಆಗಿದ್ದ ಈತ, ಹಣದ ಆಸೆಗಾಗಿ ದೇಶದ ಭದ್ರತೆಯನ್ನೇ ಪಣಕ್ಕಿಟ್ಟಿದ್ದ. ಉಗ್ರ ನಾಸೀರ್ ಹಾಗೂ ಸಲ್ಮಾನ್ ಖಾನ್‌ಗೆ ಪೊಲೀಸ್ ಬೆಂಗಾವಲು ಪಡೆಗಳ ಚಲನವಲನದ ಬಗ್ಗೆ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಎನ್ನಲಾಗಿದೆ.
-
ಡಾ. ನಾಗರಾಜ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿದ್ದ ಈತ, ತನ್ನ ವೃತ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದ. ಖೈದಿಗಳಿಂದ ಹಣ ಪಡೆದು ಕಾನೂನು ಬಾಹಿರವಾಗಿ ಜೈಲಿನೊಳಗೆ ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡುತ್ತಿದ್ದ. ಇದೇ ಮೊಬೈಲ್‌ಗಳನ್ನು ಬಳಸಿ ಉಗ್ರ ನಾಸಿರ್ ಜೈಲಿನ ಒಳಗಿಂದಲೇ ಭಯೋತ್ಪಾದನಾ ಕೃತ್ಯಗಳನ್ನು ಸಂಘಟಿಸುತ್ತಿದ್ದ ಎನ್ನುವ ಸ್ಫೋಟಕ ವಿಚಾರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
-
ಅನಿಸಾ ಫಾತಿಮಾ: ಈಕೆ ಈ ಹಿಂದೆ ಪರಾರಿಯಾಗಿದ್ದ ಆರೋಪಿ ಜುನೈದ್ ಅಹಮದ್‌ನ ತಾಯಿ. ಈಕೆ ಉಗ್ರ ನಾಸಿರ್‌ಗೆ ಹಣಕಾಸಿನ ನೆರವು ನೀಡುವುದಲ್ಲದೆ, ಮಗನ ಸೂಚನೆಯಂತೆ ಹ್ಯಾಂಡ್ ಗ್ರೈನೇಡ್ ಹಾಗೂ ವಾಕಿಟಾಕಿಗಳನ್ನು ನಿರ್ವಹಣೆ ಮಾಡುತ್ತಿದ್ದಳು. ಅಲ್ಲದೆ, ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ಈಕೆಯೇ ನೆರವು ನೀಡಿದ್ದಳು.
ಹಳೆಯ ಪ್ರಕರಣದ ಮುಂದುವರಿದ ಭಾಗ
ಈ ಹಿಂದೆ ಇದೇ ಪ್ರಕರಣದಲ್ಲಿ ಎನ್‌ಐಎ ಜುನೈದ್ ಸೇರಿ 9 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈಗ ಹೆಚ್ಚುವರಿ ತನಿಖೆಯ ನಂತರ ಈ ಮೂವರ ಪಾತ್ರವೂ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ. ಜೈಲಿನೊಳಗೆ ಬಾಂಬ್ ಸ್ಫೋಟಿಸಿ ಉಗ್ರ ನಾಸೀರ್‌ನನ್ನು ಬಿಡುಗಡೆ ಮಾಡುವ ‘ಫಿಲ್ಮ್ ಸ್ಟೈಲ್’ ಸಂಚು ಕೂಡ ಈ ತನಿಖೆಯ ವೇಳೆ ಬಯಲಾಗಿತ್ತು.
-







