ವಿವೇಕವಾರ್ತೆ : ಕುಡಿದು ವಾಹನ ಚಲಾಯಿಸಿದ (Drunk and Drive) ಯುವಕನನ್ನು ಬಂಧಿಸದ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕೇರಳದ (Kerala) ತ್ರಿಶ್ಯೂರ್‌ನಲ್ಲಿ ಈ ಘಟನೆ ನಡೆದಿದ್ದು, ತ್ರಿಶ್ಯೂರ್ ಪೂರ್ವ ಠಾಣೆಯ ಎಸ್‌ಐಗಳಾದ ಎನ್.ಪ್ರದೀಪ್, ಎಂ.ಅಫ್ಜಲ್ ಮತ್ತು ಸಿಪಿಒ ಜೋಸ್ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಕೆಲ ದಿನಗಳ ಹಿಂದೆ ಶಕ್ತನ್ ಸ್ಟ್ಯಾಂಡ್ ಬಳಿಯ ಬಾರ್ ಎದುರು ಯುವಕನೊಬ್ಬ ಕುಡಿದು ತೂರಾಡುತ್ತಿದ್ದ. ಮಿತಿ ಮೀರಿ ಕುಡಿದರೂ ಕೂಡ ತಾನೇ ಬೈಕ್ ಚಲಾಯಿಸಿ ಹೋಗಿದ್ದ. ಈ ವೇಳೆ ಕುಡಿದ ಅಮಲಿನಲ್ಲಿ ಬೈಕ್‌ನಲ್ಲಿ ಬಂದ ಯುವಕನನ್ನು ಪೊಲೀಸ್ ತಂಡ ತಡೆದಿದೆ. ಈ ವೇಳೆ ಸ್ಥಳೀಯ ರಾಜಕೀಯ ನಾಯಕನೊಬ್ಬ ಆ ಯುವಕ ತನ್ನ ಸಂಬಂಧಿಯಾಗಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಹೇಳಿದ್ದಾರೆ.
ಆಗ ಆ ಯುವಕನನ್ನು ಬಿಟ್ಟು ಕಳುಹಿಸಿದ ಪೊಲೀಸರು ಬೈಕ್ ವಶಕ್ಕೆ ಪಡೆದು ಮರುದಿನ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ತಂಡ ಮೇಲಧಿಕಾರಿಗಳಿಗೆ ಈ ವಿಷಯದ ಮಾಹಿತಿ ನೀಡಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಕುಡುಕನನ್ನು ರಾತ್ರಿ ಪೊಲೀಸ್ ಠಾಣೆಯಲ್ಲೇ ಇರಿಸುವ ಪರಿಸ್ಥಿತಿ ತಪ್ಪಿಸಲು ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ವಿವರಣೆ ನೀಡಿದ್ದರು.
ಈ ಹಿನ್ನೆಲೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೇಲಾಧಿಕಾರಿಗಳು ‘ಯುವಕನನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳದಿರುವುದು ತಪ್ಪು’ ಎಂದು ಪರಿಗಣಿಸಿ ಆ ಮೂವರು ಪೊಲೀಸರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಸಹಾಯಕ ಆಯುಕ್ತರು ನೀಡಿದ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಆಯುಕ್ತರು ಶಿಫಾರಸು ಮಾಡಿದ್ದಾರೆ. ಇತ್ತ ಘಟನೆಯ ಸಮಯದಲ್ಲಿ ತಾನು ಕರ್ತವ್ಯದಲ್ಲಿ ಇರಲಿಲ್ಲ ಎಂದು ಸಿಪಿಒ ಒಬ್ಬರು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಮಧ್ಯೆ ಬೈಕ್ ವಶಪಡಿಸಿಕೊಂಡು ಪೊಲೀಸರು ಬಿಡುಗಡೆಗೊಳಿಸಿದ ನಂತರ ಯಾರೋ ತನ್ನ ಕೈಚೀಲ ಮತ್ತು ಹಣವನ್ನು ಕದ್ದೊಯ್ದಿದ್ದಾರೆ ಎಂದು ಯುವಕ ದೂರಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿಯು ಶಕ್ತನ್ ಪ್ರದೇಶದಲ್ಲಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿ ಎಂಬುದು ಕಂಡು ಬಂದಿದೆ.
ಸದ್ಯ ಆತನನ್ನು ಕೂಡ ಬಂಧಿಸಲಾಗಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ.