ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಆದೇಶಿಸಿದೆ. ಜೊತೆಗೆ ಎಫ್‌ಆರ್‌ಪಿ ದರ ಹೊರತುಪಡಿಸಿ ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ತಿಳಿಸಿದೆ.
ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂದಾಯವಾಗಲಿದೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ ಪ್ರತಿ ಮೆಟ್ರಿಕ್ ಟನ್ಗೆ 50 ರೂ.ಗಳಂತೆ ಒಟ್ಟು 204 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತ್ತು. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್‌ಆರ್‌ಪಿ ದರ ಹೊರತುಪಡಿಸಿ ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಆದೇಶಿಸಲಾಗಿದೆ.
ಕೇಂದ್ರ ಸರ್ಕಾರ 17 – 08- 2022 ರಂದು 2022-23ನೇ ಸಾಲಿನ ಸಕ್ಕರೆ ಹಂಗಾಮಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ನಿಗದಿಗೊಳಿಸಿದ್ದು, ಶೇ.10.25 ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ರೂ. 3,050 ದರ ನಿಗದಿಗೊಳಿಸಿದೆ.
ರಾಜ್ಯ ಸರ್ಕಾರ ಈವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗ್ಯಾಸ್, ಮೊಲ್ಯಾಸಿಸ್ ಮತ್ತು ಪ್ರೆಸ್ ಮಡ್‌ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಈ ವರ್ಷದಲ್ಲಿ ಉಪ ಉತ್ಪನ್ನವಾದ ಎಥನಾಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಪ್ರಥಮ ಕಂತಿನಲ್ಲಿ ಎಫ್.ಆರ್.ಪಿ ಜೊತೆಗೆ ಪ್ರತಿ ಮೆಟ್ರಿಕ್ ಟನ್ ಒಂದಕ್ಕೆ 50 ರೂ. ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಎಥೆನಾಲ್ ಹೊಂದಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ.