ವಿವೇಕವಾರ್ತೆ : ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಿರುವುದು ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರ ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೈನಾಡಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅವರಿಗೆ ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆಗೆ ಬರಲು ಮೈಸೂರು ಸಮೀಪ. ಹೀಗಾಗಿ ಅಲ್ಲೇ ಕಾರ್ಯಕ್ರಮ ಆಯೋಜಿಸಲು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಬಗ್ಗೆ ನಮ್ಮಲ್ಲಿ ಮುಸುಕಿನ ಗುದ್ದಾಟ ಇಲ್ಲ. ಅಂಥ ಯಾವ ಕಾರಣಕ್ಕೂ ಈ ಕಾರ್ಯಕ್ರಮ ಸ್ಥಳಾಂತರವಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಶಾಸಕರಘರ್ವಾಪಸಿ?
“ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ ಶಾಸಕರಲ್ಲಿ ಕೆಲವರು ಮರಳಿ ಬರಲು ಆಸಕ್ತಿ ತೋರಿಸಿರುವ ವಿಷಯ ಗಮನದಲ್ಲಿದೆ. ಆದರೆ ಯಾರು ಬರುತ್ತಾರೆ, ಯಾವಾಗ ಬರುತ್ತಾರೆ ಎಂಬ ವಿಷಯ ನನಗೆ ತಿಳಿದಿಲ್ಲ. ಅದು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು,” ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸತೀಶ್ ಜಾರಕಿಹೊಳಿ, “ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವ ಬಂದಾಗ ನಮ್ಮ ತಾಲೂಕು ಜಿಲ್ಲೆಆಗಬೇಕೆಂದು ಕೇಳಲು ಎಲ್ಲರಿಗೂ ಅಧಿಕಾರ ಇದೆ. ಅಂತಿಮವಾಗಿ ಸರಕಾರ ಯಾವುದನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ನಿರ್ಧರಿಸುತ್ತದೆ,” ಎಂದರು.
“ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಜಾತಿ, ಗೆಲ್ಲುವ ಅಭ್ಯರ್ಥಿ ಹೀಗೆ ಎಲ್ಲವಿಚಾರಗಳೂ ಚರ್ಚೆಗೆ ಬರುತ್ತವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ, ಲಕ್ಷ್ಮಣರಾವ್ ಚಿಂಗಳೆ ಆಕಾಂಕ್ಷಿಗಳಾಗಿದ್ದಾರೆ. ಬೆಳಗಾವಿಯಲ್ಲಿಯೂ ಸಾಕಷ್ಟು ಜನ ಇದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರನಿಗೆ ಟಿಕೆಟ್ ನೀಡುವ ಕುರಿತು ನಮ್ಮ ಮುಂದೆ ಅವರು ಏನೂ ಹೇಳಿಲ್ಲ,” ಎಂದರು.