ವಿವೇಕ ವಾರ್ತೆ : ಕಳೆದ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಯಿವೊಂದಕ್ಕೆ ಗೌರವಪೂರ್ವಕವಾಗಿ ಬೀಳ್ಕೊಟ್ಟ (Dog farewell function) ಹೃದಯಸ್ಪರ್ಶಿ ಘಟನೆಯೊಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲೇ ನಡೆದಿದೆ.
ಹೌದು, ಕೋಲಾರದ ಡಿ.ಎ.ಆರ್ ಘಟಕದ ಅಪರಾಧ ದಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ “ಲೈಕಾ” ಎಂಬ ಹೆಸರಿನ ಶ್ವಾನ ಕೊಲೆಗಾರರಿಗೆ, ದರೋಡೆಕೋರರಿಗೆ ನಿಜಕ್ಕೂ ಸಿಂಹಸ್ವಪ್ನವಾಗಿತ್ತು. 11 ವರ್ಷಗಳಿಂದ ಜಿಲ್ಲಾದ್ಯಂತ ಸುಮಾರು 300 ಕ್ಕೂ ಹೆಚ್ಚು ಕೊಲೆ, ದರೋಡೆ, ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿ 35 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಸಫಲವಾಗಿತ್ತು.
ಇಂಥ ನಾಯಿಯನ್ನು ಶ್ವಾನದಳ ಸಿಬ್ಬಂದಿ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲೇ ಸನ್ಮಾನ ಮಾಡಿದ್ದು ವಿಶೇಷ.
ಯಾರೋ ಒಬ್ಬ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವಾಗಲೂ ನಾವು ಚಪ್ಪಲಿ ಕಳಚಿಟ್ಟು ನಿಲ್ಲುವುದಿಲ್ಲ. ಆದರೆ, ಕೋಲಾರದ ಎಸ್‌ಪಿ ನಾರಾಯಣ ಅವರು 11 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ವಾನ ಲೈಕಾ ಬೀಳ್ಕೊಡುಗೆ ಸಂದರ್ಭದಲ್ಲಿ ಶೂ ಕಳಚಿಟ್ಟು ಆ ನಾಯಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು.
ಇದೆಲ್ಲವನ್ನೂ ಕೂಡಾ ಪ್ರೀತಿಯಿಂದಲೇ ಹಾಗೂ ಕೃತಜ್ಞತಾ ಭಾವದಿಂದ ಕುಳಿತಿತ್ತು ಸ್ವೀಕರಿಸಿದ ಶ್ವಾನ ಲೈಕಾ.
ಸನ್ಮಾನ ಮಾಡುವಾಗ ಈ ರೀತಿ ಸಂಪ್ರದಾಯ ಪಾಲಿಸಬೇಕೂ ಅಂತಲ್ಲ. ಆದರೆ, ಹೀಗೆ ಮಾಡುತ್ತೇವೆ ಎಂದರೆ ನಾವು ಆ ನಾಯಿಗೆ ಅದೆಷ್ಟು ಗೌರವ ಕೊಡುತ್ತೇವೆ, ಪ್ರೀತಿಯನ್ನು ತೋರಿಸುತ್ತೇವೆ, ಹೃದಯದಲ್ಲಿ ಅದೆಷ್ಟು ಪೂಜ್ಯ ಭಾವನೆಯನ್ನು ಹೊಂದಿದ್ದೇವೆ ಎನ್ನುವುದರ ದ್ಯೋತಕ ಇದು. ಕೋಲಾರದ ಎಸ್‌ಪಿಯಾಗಿರುವ ಈ ಐಪಿಎಸ್ ಅಧಿಕಾರಿಯ ನಡವಳಿಕೆ ಎಲ್ಲ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ.
ನಾಯಿಗೆ ಈ ಸನ್ಮಾನ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ, ನಾಯಿಯ ಬಗೆಗಿನ ಪೊಲೀಸರ ಪ್ರೀತಿ ಮಾತ್ರ ಜಗತ್ತಿಗೆ ಅರ್ಥವಾಯಿತು.
(ಕೃಪೆ : ವಿಸ್ತಾರ ನ್ಯೂಸ್)