ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು, ಇದೊಂದು ಲಾಕಪ್ ಡೆತ್ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ವಿನೋದ್ ಕಾಟನ್ ಪೇಟೆಯ ನಿವಾಸಿಯೇ ಆಗಿದ್ದು, ಪ್ರಕರಣವೊಂದರ ಸಂಬಂಧ ಬುಧವಾರ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು.
ಗುರುವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿತ್ತು. ಆದರೆ, ಗುರುವಾರ ಬೆಳಗ್ಗೆ 3.45ಕ್ಕೆ ಠಾಣೆ ಎಸ್‌ಎಚ್‌ಒ ಆರೋಪಿ ವಿನೋದ್‌ನನ್ನು ಗಮನಿಸಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದಾಗಲೇ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆ ಸಂಬಂಧ ಕಸ್ಟೋಡಿಯಲ್ ಡೆತ್ ಪ್ರಕರಣ ದಾಖಲಾಗಿದ್ದು, ಸಿಐಡಿಯಿಂದ ಪ್ರಕರಣದ ತನಿಖೆ ನಡೆಯಲಿದೆ.