ಬೆಂಗಳೂರು: ಹೆಣ್ಣು ಮಕ್ಕಳಾದದ್ದೇ ತಪ್ಪಾಯ್ತಾ? ಹಸುಗೂಸು ಸೇರಿ ಮೂವರು ಮಕ್ಕಳನ್ನು ಬಿಟ್ಟು ಕಿರಾತಕ ಪತಿ ಪರಾರಿ!
ಬೆಂಗಳೂರು: ಪ್ರೀತಿಯ ನಾಟಕವಾಡಿ, ಕುಟುಂಬದ ಒಪ್ಪಿಗೆಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ವ್ಯಕ್ತಿಯೊಬ್ಬ, ಕೇವಲ ಹೆಣ್ಣು ಮಕ್ಕಳಾದವು ಎಂಬ ಕಾರಣಕ್ಕೆ ಪತ್ನಿ ಮತ್ತು ಮೂವರು ಮಕ್ಕಳನ್ನು ಬೀದಿಗೆ ತಳ್ಳಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಹರೀಶ್ ಎಂಬಾತನೇ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ನಾಪತ್ತೆಯಾಗಿರುವ ಪತಿ.
ಪ್ರೀತಿ ಮದುವೆ.. ಹೆಣ್ಣು ಮಕ್ಕಳಾದಾಗ ಶುರುವಾಯ್ತು ವಿಘ್ನ!
ಮೂಲತಃ ರಾಜಸ್ಥಾನದ ಹರೀಶ್, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಈತ ಸ್ಟಾಫ್ ನರ್ಸ್ ಆಗಿರುವ ವರಲಕ್ಷ್ಮಿ ಎಂಬಾಕೆಯನ್ನು ಪ್ರೀತಿಸಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆಯಾಗಿದ್ದ. ಸಂಸಾರ ಸುಗಮವಾಗಿಯೇ ಸಾಗುತ್ತಿತ್ತು. ಆದರೆ, ಇವರಿಗೆ ಹುಟ್ಟಿದ ಮೊದಲ ಇಬ್ಬರು ಮಕ್ಕಳು ಹೆಣ್ಣಾದಾಗ ಹರೀಶ್‌ನ ಅಸಮಾಧಾನ ಶುರುವಾಗಿತ್ತು.
ಮೂರನೇ ಬಾರಿಯೂ ಹೆಣ್ಣಾದಾಗ ಕ್ರೌರ್ಯದ ಪರಮಾವಧಿ!
ಮೂರನೇ ಮಗುವಾದರೂ ಗಂಡು ಹುಟ್ಟಬಹುದು ಎಂಬ ಆಸೆಯಲ್ಲಿದ್ದ ಹರೀಶ್‌ಗೆ ವಿಧಿಯಾಟ ಬೇರೆಯೇ ಇತ್ತು. ಒಂದೂವರೆ ತಿಂಗಳ ಹಿಂದೆ ವರಲಕ್ಷ್ಮಿ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದನ್ನೇ ನೆಪವಾಗಿಸಿಕೊಂಡ ಹರೀಶ್, ಹಸುಗೂಸು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಪತ್ನಿಯ ಮಡಿಲಿಗೇ ಹಾಕಿ ಮನೆಯಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ದಿನ ಭವಿಷ್ಯ 05-01-2026
ಬಾಡಿಗೆ ಕಟ್ಟಲೂ ಹಣವಿಲ್ಲ: ಪತ್ನಿಯ ಕಣ್ಣೀರಿನ ಕಥೆ
ಪತಿ ಹರೀಶ್ ವಿರುದ್ಧ ವರಲಕ್ಷ್ಮಿ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಮೂವರು ಹೆಣ್ಣು ಮಕ್ಕಳಾದರು ಎಂಬ ಕಾರಣಕ್ಕೆ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಈಗ ಆತ ಮತ್ತೊಬ್ಬ ಮಹಿಳೆಯೊಂದಿಗೆ ವಾಸವಿದ್ದಾನೆ. ಮಕ್ಕಳ ಶಾಲಾ ಫೀಸ್ ಕಟ್ಟಲು, ಮನೆ ಬಾಡಿಗೆ ನೀಡಲು ಕೂಡ ನನ್ನ ಬಳಿ ಹಣವಿಲ್ಲ. ಒಂದೂವರೆ ತಿಂಗಳ ಕಂದಮ್ಮನನ್ನು ಹಿಡಿದುಕೊಂಡು ನಾನು ಎಲ್ಲಿಗೆ ಹೋಗಲಿ?” ಎಂದು ವರಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.
ಪೊಲೀಸರ ವಿರುದ್ಧ ಸಂತ್ರಸ್ತೆಯ ಅಸಮಾಧಾನ
ದೂರು ನೀಡಿ ಒಂದು ತಿಂಗಳು ಕಳೆದಿದ್ದರೂ ಪೊಲೀಸರು ಇದುವರೆಗೆ ಹರೀಶ್‌ನನ್ನು ಪತ್ತೆ ಹಚ್ಚಿಲ್ಲ ಅಥವಾ ಠಾಣೆಗೆ ಕರೆಸಿ ವಿಚಾರಣೆ ನಡೆಸಿಲ್ಲ ಎಂದು ವರಲಕ್ಷ್ಮಿ ಆರೋಪಿಸಿದ್ದಾರೆ. ಹಸುಗೂಸಿನೊಂದಿಗೆ ನ್ಯಾಯಕ್ಕಾಗಿ ಈ ತಾಯಿ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.






