ವಿವೇಕವಾರ್ತೆ : ಮಹಿಳೆಯನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಇಡೀ ದಿನ ಅತ್ಯಾಚಾರ ನಡೆಸಿದ್ದ ಐವರು ಕಾಮುಕ ಆರೋಪಿಗಳನ್ನು (Accused) ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸರು (Gokak Police) ಯಶಸ್ವಿಯಾಗಿದ್ದಾರೆ. ಓರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆನಚಿನಮರಡಿ ಗ್ರಾಮದ ರಮೇಶ್ ಉದ್ದಪ್ಪ ಖಿಲಾರಿ, ದುರ್ಗಪ್ಪ ಸೋಮಲಿಂಗ ವಡ್ಡರ್, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣ ಪ್ರಕಾಶ್ ಪೂಜೇರಿ, ರಾಮಸಿದ್ದಪ್ಪ ತಪ್ಪಸಿ ಬಂಧಿತರು. ಮತ್ತೋರ್ವ ಆರೋಪಿ ಬಸವರಾಜ್ ಖಲಾರಿ ಪರಾರಿಯಾಗಿದ್ದಾನೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ (SP Bhimashankar Guled) ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಸೆಪ್ಟೆಂಬರ್ 5ರಂದು ಗೋಕಾಕ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಭೀಮಾಶಂಕರ್ ಗುಳೇದ್ ನೇತೃತ್ವದಲ್ಲಿ ಗೋಕಾಕ್ ಪೊಲೀಸರು ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸಿ ಪ್ರಕರಣ ಪತ್ತೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಸೆಪ್ಟೆಂಬರ್ 5ರಂದು ನಡೆದಿದ್ದು ಏನು?
ಸೆಪ್ಟೆಂಬರ್ 5ರಂದು ಸಂತ್ರಸ್ತೆ ಗೋಕಾಕ್ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಮಹಿಳೆ ಜೊತೆ ವ್ಯಕ್ತಿಯೋರ್ವ ಸಹ ಜೊತೆಗಿದ್ದನು. ಮಹಿಳೆಗೆ ಪರಾರಿಯಾಗಿರೋ ಆರೋಪಿ ಬಸವರಾಜ್ ಖಲಾರಿಯ ಮುಖ ಪರಿಚಯವಿತ್ತು.
ಮಹಿಳೆಯನ್ನು ಭೇಟಿಯಾಗಿ ಬಸವರಾಜ್ ಖಿಲಾರಿ ಮನೆಗೆ ಬಂದು ಟೀ ಕುಡಿದು ಹೋಗುವಂತೆ ಒತ್ತಾಯಿಸಿದ್ದಾನೆ. ಒತ್ತಡಕ್ಕೆ ಮಣಿದ ಮಹಿಳೆ ತನ್ನ ಜೊತೆಯಲ್ಲಿದ್ದ ವ್ಯಕ್ತಿ ಜೊತೆ ಬಸವರಾಜ್ ಖಿಲಾರಿ ಮನೆಗೆ ಹೋಗಿದ್ದಾರೆ. ಒಳಗೆ ಬರುತ್ತಿದ್ದಂತೆ ಉಪಾಯವಾಗಿ ಇಬ್ಬರನ್ನು ಬಸವರಾಜ್ ಕೂಡಿ ಹಾಕಿದ್ದಾನೆ.
ಹಣ, ಚಿನ್ನಾಭರಣ ಕಿತ್ಕೊಂಡ್ರು!
ಮಹಿಳೆ ಬರುತ್ತಿದ್ದಂತೆ ಇನ್ನುಳಿದ ಆರೋಪಿಗಳು ಬಸವರಾಜ್ ಮನೆಗೆ ಬಂದಿದ್ದಾರೆ. ಇಡೀ ದಿನ ಆರು ಜನರು ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಇಬ್ಬರ ಬಳಿಯಲ್ಲಿದ್ದ 2 ಸಾವಿರ ರೂಪಾಯಿ, ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ನಂತರ ಸಂತ್ರಸ್ತರ ಬಳಿಯಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಂಡಿದ್ದಾರೆ.
ಕೊನೆಗೆ ವ್ಯಕ್ತಿ ಮತ್ತು ಮಹಿಳೆಯ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿ ಬೆದರಿಕೆ ಹಾಕಿದ್ದಾರೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ನಿಮ್ಮ ಮರ್ಯಾದೆ ಹಾಳು ಮಾಡುತ್ತೇವೆ ಎಂದು ಬೆದರಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸೆಪ್ಟೆಂಬರ್ 14ರಂದು ಮಹಿಳೆಯನ್ನು ಹೆದರಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು 9 ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ಹಿನ್ನೆಲೆ ತಡಕಾಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಂಧಿತರು ಗೋಕಾಕ್ ಭಾಗದ ಖಿಲಾರಿ ಗ್ಯಾಂಗ್ ಮತ್ತು ಎಸ್ಪಿ ಸರ್ಕಾರ್ ಗ್ಯಾಂಗ್ ಸದಸ್ಯರು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಪ್ರತಿಯೊಬ್ಬ ಆರೋಪಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರರಿಂದ ಏಳು ಪ್ರಕರಣಗಳು ದಾಖಲಾಗಿದೆ.
ಆರೋಪಿಗಳನ್ನು ಗುರುತಿಸಿದ ಸಂತ್ರಸ್ತೆ
ಆರೋಪಿಗಳ ವಿಚಾರಣೆ ತೀವ್ರಗೊಳಿಸಿದಾಗ ಸೆಪ್ಟೆಂಬರ್ 5ರಂದು ನಡೆಸಿದ ಸಾಮೂಹಿಕ ಅತ್ಯಾಚಾರವನ್ನು ಬಾಯಿ ಬಿಟ್ಟಿದ್ದಾರೆ. ಸಂತ್ರಸ್ತ ಮಹಿಳೆ ಭಯದಿಂದ ಯಾವುದೇ ದೂರು ದಾಖಲು ಮಾಡಿರಲಿಲ್ಲ. ಪೊಲೀಸರು ಮನವೊಲಿಸಿದ ಬಳಿಕೆ ಸೆಪ್ಟೆಂಬರ್ 29ರಂದು ಮಹಿಳೆ ದೂರು ದಾಖಲಿಸಿ, ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಭೀಮಾಶಂಕರ್ ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 2 ಗಂಟೆಗೆ ಪ್ರಕರಣದ ಆರೋಪಿ ರಮೇಶ್ ಉದ್ದಪ್ಪ ಖಿಲಾರಿಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಆತನ ಬೈಕ್ ಅಪಘಾತಕ್ಕೆ ಒಳಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಚೇತರಿಸಿದ ಬಳಿಕ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.