ಮೆಡಿಕಲ್ ಶಾಪ್‌ಗೆ ಬರುವ ಯುವತಿಯರು, ಬಾಲಕಿಯರು ಹಾಗೂ ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಕಾಮಿ ಆರೋಪಿ ಅಮ್ಜದ್ ಎಂದು ತಿಳಿದುಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ತನ್ನ ಕಾಮ ತೃಷೆಗೆ ಪೈಶಾಚಿಕ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಮೆಡಿಕಲ್ ಸ್ಟೋರ್ಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಕಾಮುಕ, ಬಲವಂತದಿಂದ ಹಾಗೂ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲದೇ ಮೊಬೈಲ್ನಲ್ಲಿ ಗೊತ್ತಾಗದಂತೆ ವಿಡಿಯೋ ಕೂಡ ಮಾಡಿಕೊಳ್ಳುತ್ತಿದ್ದ.
ಸುಮಾರು 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ತನ್ನ ಲ್ಯಾಪ್ ಟಾಪ್ನಲ್ಲೂ ಹಾಕಿಕೊಂಡು ಅವುಗಳನ್ನು ವೀಕ್ಷಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಾಮಿ ಅಮ್ಜದ್ ದಾವಣಗೆರೆ ನಗರದ ದೇವರರಾಜ್ ಅರಸು ಬಡಾವಣೆಯ ನಿವಾಸಿಯಾಗಿದ್ದು, ಹಿಂದೊಮ್ಮೆ ಶಾಲಾ ಬಾಲಕಿಯನ್ನು ಪುಸಲಾಯಿಸಿ ತನ್ನ ಹೀನ ಕೃತ್ಯಕ್ಕೆ ಬಳಸಿಕೊಂಡು ದೌರ್ಜನ್ಯ ಎಸಗಿದ್ದ. ಕೆಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದ. ಸದ್ಯ CEN ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 67, 67 (A), 67(B) IT ಕಾಯ್ದೆ ಮತ್ತು ಕಲಂ 77 ಹಾಗೂ ಕಲಂ 4, 6, 14, 15 ಪೋಕ್ಸೋ ಕಾಯ್ದೆ 2012ರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.