ವಿವೇಕವಾರ್ತೆ : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾಗಿರುವ ಶಕ್ತಿ ಯೋಜನೆಗೆ ನಾಡಿನಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಸಾವಿರಾರರು ಮಹಿಳೆಯರು ಯೋಜನೆಯ ಲಾಭವನ್ನು ತಮ್ಮ ಪ್ರತಿನಿತ್ಯದ ಜೀವನದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ ರಾಜ್ಯ ಸರ್ಕಾರ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.
ಹೌದು, ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಉಚಿತ ಬಸ್ ಪ್ರಯಾಣದ ಯೋಜನೆಯ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರು ನಿತ್ಯ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ, ಸರ್ಕಾರಿ ಬಸ್‌ಗಳಲ್ಲಿ ಪ್ಯಾನಿಕರ್ ಬಟನ್ ಹಾಗೂ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಲು ಸರ್ಕಾರ ತೀರ್ಮಾನ ಮಾಡಿದೆ.
ಪ್ರಮುಖವಾಗಿ ಕೆಎಸ್ಆರ್ಟಿಸಿ ಬಸ್ ಸೇರಿದಂತೆ ಸರ್ಕಾರಿ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಕೆಗೆ 30.74 ಕೋಟಿ ರೂಪಾಯಿ ವೆಚ್ಚದ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಂಪುಟ ಅಸ್ತು ಎಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಸಚಿವ ಎಚ್ಕೆ ಪಾಟೀಲ್, ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಸ್ಗಾಗಿ ಪ್ರಯಾಣಿಕರು ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ಉತ್ತಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಬಸ್‌ಗಳಲ್ಲಿ ಪ್ರತ್ಯೇಕ ಕೇಂದ್ರ ನಿಯಂತ್ರಣ ಕೊಠಡಿಯೊಂದಿಗೆ ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಮತ್ತು ಪ್ಯಾನಿಕ್ ಬಟನ್ ವ್ಯವಸ್ಥೆಯನ್ನು ಅಳವಡಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ಪ್ಯಾನಿಕ್ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಪ್ರಯಾಣಿಕರಿಗೆ ಅವರು ಎಲ್ಲಿದ್ದಾರೆಂದು ತಿಳಿಯಲು ಮತ್ತು ಬಸ್‌ಗಳಿಗಾಗಿ ಕಾಯುತ್ತಿರುವವರಿಗೆ ಅನುಕೂಲವಾಗಲು ಸಹಾಯ ಮಾಡುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಅಲ್ಲದೇ, ಯಾವುದೇ ಪ್ಯಾನಿಕ್ ಪರಿಸ್ಥಿತಿ ಇದ್ದರೆ ನಿಯಂತ್ರಣ ಕೊಠಡಿಯನ್ನು ಎಚ್ಚರಿಸುವ ಬಟನ್ ಇರುತ್ತದೆ. ತಕ್ಷಣವೇ ಕ್ಷಿಪ್ರ ಪಡೆ ಅಥವಾ ಯಾವುದೇ ವ್ಯವಸ್ಥೆ ಮಾಡಲಾಗಿದ್ದರೂ ಪ್ರಯಾಣಿಕರನ್ನು ರಕ್ಷಿಸಲಾಗುತ್ತದೆ. 34 ಕೋಟಿ ರೂಪಾಯಿಗಳನ್ನು ಯೋಜನೆಗೆ ನಿಗದಿಪಡಿಸಲಾಗಿದೆ ಎಂದು ಕಾನೂನು ಸಚಿವ ತಿಳಿಸಿದ್ದಾರೆ.
ಉಳಿದರೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ 16 ವಿಷಯಗಳ ಬಗ್ಗೆ ಚರ್ಚೆಯಾಗಿದೆ. 16 ವಿಷಯಗಳಲ್ಲಿ 15ಕ್ಕೆ ಸಂಪುಟ ಅಸ್ತು ಎಂದಿದ್ದು, ಒಂದನ್ನ ಮುಂದೂಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.