ಕಾಡಿನಿಂದ ಈಗ ತಾನೆ ಕಿತ್ತು ತಂದಿರುವ ತಾಜಾ ಜೇನಿದು..ಯಾವುದೇ ಕಲಬೆರಕೆ ಇಲ್ಲ ಎಂದು ನಂಬಿಸಲು ಜೇನು ಗೂಡಿನೊಂದಿಗೆ ರಸ್ತೆ ಬದಿಗಳಲ್ಲಿ ಜೇನು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ, ಖರೀದಿಸಿಯೂ ಇರುತ್ತೀರಿ. ಆದರೆ ಇನ್ಮುಂದೆ ಖರೀದಿಸುವ ಮುನ್ನ ಎಚ್ಚರದಿಂದಿರಿ ಯಾಕೆ ಅಚಿ ತೀರಾ ಹಾಗಿದ್ರೆ ಈ ದೃಶ್ಯಗಳನ್ನೊಮ್ಮೆ ನೋಡಿ..
ನಗರ ಸೇರಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ರಸ್ತೆ ಬದಿ ಜೇನು ಕೊಳ್ಳುವಾಗ ಸ್ವಲ್ಪ ಎಚ್ಚರಿಕೆಯಿಂದಿರಿ.ಏಕೆಂದರೆ, ಅಸಲಿಯ ತಲೆಯ ಮೇಲೆ ಹೊಡೆದಂತಿರುವ ನಕಲಿ ಜೇನು ಮಾರಾಟ ದಂಧೆ ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ವಿಸ್ತರಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಡಿನಿಂದ ನಾವು ಕಷ್ಟಪಟ್ಟು ಜೇನು ಗೂಡುಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ, ನಮ್ಮಲ್ಲಿ ಸಿಗುವ ಪರಿಶುದ್ಧ ಜೇನು ಬೇರೆಲ್ಲೂ ಸಿಗಲಾರದು ಎಂದು ಕತೆಗಳನ್ನು ಕಟ್ಟಿ, ಕೊಳ್ಳಲು ಬಂದವರ ಎದುರೇ ಜೇನು ಗೂಡನ್ನು ಹಿಂಡಿ ತುಪ್ಪ ತೆಗೆದು ನಂಬಿಸುತ್ತಾರೆ. ಹೀಗೆ ಮಂಕುಬೂದು ಎರಚಿ ೩೫೦-೫೦೦ ರೂಪಾಯಿಗೆ ಒಂದು ಕೆಜಿ ಜೇನು ಮಾರಾಟ ಮಾಡುತ್ತಿದ್ದಾರೆ. ಆದರೆ ಅದರ ಅಸಲಿಯತ್ತು ಬೇರೆಯೇ ಇದೆ.
ಪರ ರಾಜ್ಯಗಳಿಂದ ಕೂಲಿ ಅರಸಿ ಬಂದಿರುವ ಐವತ್ತಕ್ಕೂ ಹೆಚ್ಚು ಜನರಿರುವ ಗುಂಪು ನಗರದ ಕೃಷ್ಣ ನಗರದ ಸಮೀಪ ಬಯಲಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ವಾಸವಾಗಿದ್ದಾರೆ. ಹೊತ್ತು ಸರಿದು ಕತ್ತಲಾದ ಬಳಿಕ ಅವರು ನಕಲಿ ಜೇನುತುಪ್ಪ ತಯಾರಿ ಶುರು ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಿರುವ ಪಾತ್ರೆ, ಸಣ್ಣ ಡ್ರಂ, ಸಾಗಿಸಲು ಬೆಂಗಳೂರು ಮೂಲದ ಆಟೋ ರಿಕ್ಷಾಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ.
ಕಾಯಿಸಿದ ಬೆಲ್ಲ, ಬಣ್ಣ ಬಿಡುವ ಎಲೆಗಳು, ಸಕ್ಕರೆ, ಕೆಲವು ರಾಸಾಯನಿಕಗಳಿಂದ ತಯಾರಿಸಿದ ಅಂಟು ಬಳಸಿ ನಕಲಿ ಜೇನು ತಯಾರಿಸುವ ಈ ಜನರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ತಣ್ಣೀರುಹಳ್ಳ, ಸಂತೆಪೇಟೆ ಹೀಗೆ ಜನ ಸಂದಣಿ ಹೆಚ್ಚಿರುವ ಸ್ಥಳಗಳ ರಸ್ತೆಬದಿ ಕುಳಿತು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಕುಟುಂಬಗಳು ಒರಿಸ್ಸಾ ಮೂಲದಿಂದ ಬಂದಿವೆ ಎಂದು ಹೇಳಲಾಗಿದ್ದು ನಕಲಿ ಜೇನು ಮಾರಾಟ ದಂಧೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ.
ಕಳೆದ ಹಲವು ತಿಂಗಳಿಂದ ಈ ದಂಧೆ ನಡೆಯುತ್ತಿದ್ದರೂ ಯಾರಿಗೂ ತಿಳಿದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡು ಕೆಲವು ಯುವಕರು ಶುಕ್ರವಾರ ರಾತ್ರಿ ನಕಲಿ ಜೇನು ತಯಾರಿಸುತ್ತಿರುವ ಸ್ಥಳಕ್ಕೆ ತೆರಳಿದಾಗ ಎಲ್ಲವೂ ಬಟಾ ಬಯಲಾಯಿತು. ಅವರು ನಕಲಿ ಜೇನು ತಯಾರಿಸುವ ದೃಷ್ಯಗಳನ್ನು ನಾವು ವೀಡಿಯೋ ಮಾಡುತ್ತಿದ್ದುದನ್ನು ಅರಿತ ಅವರಲ್ಲಿನ ಕೆಲವರು ಕಾಲ್ಕಿತ್ತರು. ಅಲ್ಲಿದ್ದ ಕೆಲವು ಮಹಿ¼ಯರನ್ನು ಹಿಂದಿಯಲ್ಲಿ ಮಾತನಾಡಿಸಿದೆವು.ನಾವೇನು ಕಳ್ಳತನ ಮಾಡುತ್ತಿದ್ದೀವೆಯೇ, ನಾವು ಬಡವರು, ಮಕ್ಕಳು ಮರಿಯನ್ನು ಸಾಕಬೇಕು. ಜೀವನಕ್ಕಾಗಿ ಏನೋ ಮಾಡಿಕೊಂಡಿದ್ದೇವೆ. ಇದರಲ್ಲೇನು ತಪ್ಪಿದೆ. ದೊಡ್ಡ ದೊಡ್ಡ ಸುಲಿಗೆ ಮಾಡುತ್ತಿರುವವರನ್ನು ಹೋಗಿ ಹಿಡಿಯಿರಿ, ನಮ್ಮಂತವರ ಮೇಲೆ ನಿಮಗೇಕೆ ಕಣ್ಣು ಎಂದು ಗೋಳಾಡಿದರು. ನೀವು ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದ್ದಕ್ಕೆ, ನಾವು ಒರಿಸ್ಸಾದವರು. ಇಲ್ಲಿಗೆ ಬಂದು ಮೂರು ದಿನಗಳಾಯಿತು ಅಷ್ಟೆ. ನಾವು ಊರೂರು ತಿರುಗಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುವವರು ಎಂದು ನಂಬಿಸುವ ನಾಟಕವಾಡಿದರು. ಜನರಿಗೆ ಟೋಪಿ ಹಾಕುವುದೇ ನಿಮ್ಮ ವ್ಯಾಪಾರವೇ ಎಂದು ಕೇಳಿದ ಕೂಡಲೇ, ನಾವು ಸಿಕಿಬಿದ್ದೆವು ಎಂದು ಅರಿವಾಗಿ ಮಕ್ಕಳೊಂದಿಗೆ ಅಲ್ಲಿಂದ ಓಡಿದರು.
ಪೊಲೀಸರಿಗೆ ಫೋನ್ ಮಾಡಿ ನಾವು ವಿಷಯ ತಿಳಿಸುವುದನ್ನು ಗಮನಿಸಿದ ಅದೇ ಗುಂಪಿನ ಕೆಲವು ಯುವಕರು ತುಸು ದೂರದಲ್ಲಿಯೇ ನಿಂತು ದೊಣ್ಣೆ, ಕಲ್ಲುಗಳಿಂದ ನಮ್ಮ ಬಳಿಗೆ ತೂರಿ ಓಡಿಸಲು ಪ್ರಯತ್ನಿಸಿದರು. ಇನ್ನೆಲ್ಲಿ ಸಿಕ್ಕಿ ಬೀಳುತ್ತೇವೆಯೋ ಎಂದು ಹೆದರಿ ತಯಾರಿಸಿದ್ದ ನಕಲಿ ಜೇನನ್ನು ಪಕ್ಕದ ಮೋರಿಗೆ ಸುರಿದು ನಾಶಪಡಿಸಿದರು. ಪೊಲೀಸರು ಸ್ಥಳಕ್ಕೆ ಬರುವುದರೊಳಗೆ ಅವರು ಎಲ್ಲ ಸಾಕ್ಷಿಗಳ ಳನ್ನು ನಾಶಪಡಿಸಿದರು.ಆದರೂ ಸುಮ್ಮನಾಗದ ಪೊಲೀಸರು ನಕಲಿ ಜೇನು ತಯಾರಿಕೆಗೆ ಬಳಸಿದ್ದ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಪರ ಊರುಗಳಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಸಾವಿರಾರು ಪ್ರವಾಸಿಗರು ಇಲ್ಲಿನ ಜೇನು, ಕಾಫಿ, ಚಹಾಪುಡಿ, ಏಲಕ್ಕಿ ಮೊದಲಾದವನ್ನು ಕೊಂಡು ಹೋಗುತ್ತಾರೆ. ಮಲೆನಾಡು ಭಾಗದಲ್ಲಿ ಸಿಗುವ ಇಂತಹ ಪದಾರ್ಥಗಳು ಪರಿಶುದ್ಧ ಎಂಬ ನಂಬಿಕೆಯಿಂದ ಬಹುತೇಕರು ಕೊಂಡು ಹೋಗುತ್ತಾರೆ. ಹಾಸನ, ಬೇಲೂರು, ಸಕಲೇಶಪುರ, ಗುಂಡ್ಯ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸುತ್ತಮುತ್ತ ಪ್ರವಾಸಿಗರನ್ನೇ ನಂಬಿ ಜೀವನ ನಡೆಸುವ ಹಲವು ಕುಟುಂಬಗಳಿವೆ. ಆದರೆ ಇಂತಹ ವ್ಯವಸ್ಥೆಯೊಳಗೆ ನಕಲಿ ಜೇನು ಯತಾರಿಸಿ ವಂಚಿಸುವ ಕೃತ್ಯದಿಂದ ಜನರು ಎಲ್ಲವನ್ನೂ ಅನುಮಾನದಿಂದಲೇ ನೋಡುವಂತಾಗಿದೆ.
ಕೃಪೆ- ಜಿ ನ್ಯೂಸ್ ಕನ್ನಡ