ವಿವೇಕವಾರ್ತೆ ಬೆಂಗಳೂರು;- ನಗರದ ದೊಡ್ಡಬಾಣಸವಾಡಿಯಲ್ಲಿ ಮದ್ಯದ ಅಮಲಿನಲ್ಲಿ ಶಾಲಾ ವಾಹನ ಚಲಾಯಿಸಿದ ಚಾಲಕ ಅಪಘಾತವೆಸಗಿ ಪಾದಚಾರಿಯ ಪ್ರಾಣ ತೆಗೆದ ಘಟನೆ ಜರುಗಿದೆ.
ಆಂಜಿನಪ್ಪ ಮೃತ ದುರ್ದೈವಿ. ಅ.10ರ ಮಧ್ಯಾಹ್ನ 12:30ರ ಸುಮಾರಿಗೆ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿದ್ದ ಖಾಸಗಿ ಶಾಲಾ ಬಸ್ ಅನ್ನು ಸುಭಾಷ್ ಚಲಾಯಿಸುತ್ತಿದ್ದರು. ಬಸ್ ದೊಡ್ಡಬಾಣಸವಾಡಿ ಸಮೀಪ ಬರುತ್ತಿತ್ತು. ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ನಂತರ ಮೆಡಿಕಲ್ ಶಾಪ್‌ನಿಂದ ಮನೆಗೆ ತೆರಳುತ್ತಿದ್ದ ಆಂಜಿನಪ್ಪ ಎಂಬವರಿಗೂ ಗುದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 11ರಂದು ಆಂಜಿನಪ್ಪ ಸಾವನ್ನಪ್ಪಿದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸುಭಾಷ್ನನ್ನು ಬಂಧಿಸಲಾಗಿದೆ. ಬಸ್ ಚಲಾಯಿಸುವಾಗ ಚಾಲಕ ಕಂಠಪೂರ್ತಿ ಕುಡಿದಿದ್ದ ಎಂದು ತಿಳಿದು ಬಂದಿದೆ.