ವಿವೇಕವಾರ್ತೆ : ಬೀದರ್ ಜಿಲ್ಲೆ ಬಸವಕಲ್ಯಾಣದ ಉಪ ತಹಸೀಲ್ದಾರ್ ಪಹಣಿಯಲ್ಲಿ ಹೆಸರು ಸೇರಿಸುವ ಕೆಲಸಕ್ಕೆ ಒಂದು ಲಕ್ಷ ರೂಪಾಯಿ ಲಂಚವನ್ನು ಪಡೆಯುತ್ತಿರುವಾಗಲೇ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಸೀಲ್ದಾರ್ ಶಿವಾನಂದ ಬಿರಾದಾರ್ ಎಂದು ತಿಳಿದುಬಂದಿದೆ.
ಲಂಚದ ಬೇಡಿಕೆ ಕುರಿತು ದೂರು ಬಂದ ಹಿನ್ನೆಲೆ ಲೋಕಾಯುಕ್ತ ಕಾರ್ಯಾಚರಣೆ ನಡೆಸಿತ್ತು. ಉಜಳಂಬ ಗ್ರಾಮದ ರೈತ ಸುಧೀರ ಎಂಬುವವರಿಂದ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಕೊಹಿನೂರು ನಾಡಕಚೇರಿಯಲ್ಲಿ ಉಪತಹಸೀಲ್ದಾರ್ ಆಗಿರುವ ಶಿವಾನಂದ ಬಿರಾದಾರ್ ಅವರನ್ನು ಲೋಕಾಯುಕ್ತ ತಂಡ ಬಂಧಿಸಿದೆ.
ಸುಧೀರ, ಮ್ಯುಟೇಶನ್ ಮತ್ತು ಪಹಣಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ಮಾಡಿಕೊಡಲು ಶಿವಾನಂದ ಅವರು 2,50,000 ರೂಪಾಯಿ ನೀಡುವಂತೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಮೊತ್ತ ಕಡಿಮೆ ಮಾಡುವಂತೆ ಬೇಡಿದಾಗ ಕೊನೆಗೆ 1,00,000 ರೂಪಾಯಿಗೆ ಲಂಚದ ಮೊತ್ತವನ್ನು ಶಿವಾನಂದ ಇಳಿಕೆ ಮಾಡಿದ್ದರು.
ಇದರಂತೆ ಆ 1 ಲಕ್ಷ ರೂಪಾಯಿಯನ್ನು ಸುಧೀರ ಇಂದು ಕೊಡಲು ಹೋಗಿದ್ದರು. ಅದಕ್ಕಿಂತ ಮುಂಚೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರ ಮಾರ್ಗದರ್ಶನದಲ್ಲಿ ಸುಧೀರ ಲಂಚದ ಹಣ ಕೊಡಲು ಹೋಗಿದ್ದರು.
ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಶಿವಾನಂದ ಅವರನ್ನು ಲಂಚದ ಹಣದ ಸಹಿತ ಹಿಡಿದು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಆರೋಪಿ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೋಕಾಯುಕ್ತ ಡಿವೈಎಸ್‌ಪಿ ಎನ್.ಎಂ. ಓಲೇಕಾರ್ ತಂಡ ಈ ಕಾರ್ಯಾಚರಣೆ ನಡೆಸಿತ್ತು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಆರ್.ಕರ್ನೂಲ್ ತಿಳಿಸಿದ್ದಾರೆ.