ವಿವೇಕವಾರ್ತೆ;- ಬಿಜೆಪಿ-ಜೆಡಿಎಸ್ ಮೈತ್ರಿಗೆ ಪಕ್ಷದ ವರಿಷ್ಠರು ನಿರ್ಧರಿಸಿದ್ದು, ಇದಕ್ಕೆ ಎಲ್ಲಾ ಕಾರ್ಯಕರ್ತರು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ಎರಡು ಪಕ್ಷಗಳ ಕಾರ್ಯಕರ್ತರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ವಿರೋಧಿಸಿಕೊಂಡು ಕೆಲಸ ಮಾಡಿದ್ದಾರೆ. ಆದರೀಗ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ವೈಯಕ್ತಿಕ ದ್ವೇಷ, ಭಿನ್ನಾಭಿಪ್ರಾಯ ಮರೆತು ಅಣ್ಣತಮ್ಮಂದಿರಂತೆ ಜೆಡಿಎಸ್ ಜತೆ ಒಗ್ಗೂಡಿ ಕೆಲಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಯಾರೇ ಮೈತ್ರಿ ಅಭ್ಯರ್ಥಿಯಾದರೂ ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನಸಭೆ ಚುನಾವಣೆ ವೇಳೆ ಯಾರಿಗೂ ಬಹುಮತ ಬರುವುದಿಲ್ಲ ನಾನು ಕಿಂಗ್ ಮೇಕರ್ ಆಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಂದುಕೊಂಡಿದ್ದರು. ಅವರು ಚನ್ನಪಟ್ಟಣದಲ್ಲಿ ಗೆದ್ದರು, ಆದರೆ ಅವರ ಪಕ್ಷ ರಾಮನಗರ, ಮಂಡ್ಯ ಸೇರಿದಂತೆ ಬಹುತೇಕ ಕಡೆ ಸೋಲುಭವಿಸಿತು. ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳವೇ ಕಾರಣ. ಈ ವಿಚಾರವನ್ನು ನಾವು ಮೊದಲೇ ಆಲೋಚನೆ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.