ವಿವೇಕವಾರ್ತೆ;- ಗುತ್ತಿಗೆದಾರನ ಮನೆಯಲ್ಲಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಬಿಜೆಪಿ ಟ್ವಿಸ್ಟ್ ಕೊಟ್ಟಿದೆ. ಹಣ ಪತ್ತೆಯಾದ ಬೆನ್ನಲ್ಲೇ ಪಂಚರಾಜ್ಯಗಳ ಚುನಾವಣೆ ಲಿಂಕ್ ಆಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಗುತ್ತಿಗೆದಾರರು ಬಳಿ ಇಷ್ಟೆಲ್ಲಾ ಹಣ ಕಾಣಲು ಸಾಧ್ಯವಿಲ್ಲ, ಇದು ಕಲೆಕ್ಷನ್ ದುಡ್ಡು, ವಸೂಲಿ ದುಡ್ಡು, ಪರ್ಸೆಂಟೇಜ್ ದುಡ್ಡು.
ಗುತ್ತಿಗೆದಾರರಿಗೆ ಟಾರ್ಚರ್ ನೀಡಿ ಕಲೆಕ್ಷನ್ ಮಾಡಲಾಗಿದೆ. ಈ ಹಣ ಯಾರಿಗೆ ಹೋಗಬೇಕು ಅನ್ನೋದನ್ನು ಗುತ್ತಿಗೆದಾರರು ಹೇಳಬೇಕಿದೆ ಎಂದಿದ್ದಾರೆ. ಇವತ್ತು ಪತ್ತೆಯಾದ ಹಣ ಕೇವಲ ಸ್ಯಾಂಪಲ್ ಅಷ್ಟೇ. ಇನ್ನೂ ದೊಡ್ಡ ಪ್ರಮಾಣದಲ್ಲಿ ಕಲೆಕ್ಷನ್ ಆಗ್ತಿದೆ. ಇದು ಎಟಿಎಂ ಸರ್ಕಾರ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತೆ ಎಂದು ಈ ಹಿಂದೆ ಅಮಿತ್ ಶಾ ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂದಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ, ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ ಪತಿ ಅಂಬಿಕಾಪತಿಯ ಮನೆಯಲ್ಲಿ ಐಟಿ ಅಧಿಕಾರಿಗಳು ಸೀಜ್ ಮಾಡಿರುವುದು 42 ಕೋಟಿ ಹಣ! ಈತ ಯಾರ “ಚಿರಂಜೀವಿ” ಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರ ಬಳಿ ಕೇಳಿದರೆ ನಿಜ ಹೊರಬರಬಹುದು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗೆ ಇಳಿದರೆ, ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬ ತನಿಖೆಯಾಗಲಿ. “ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ! ಮಹದೇವಪ್ಪನ ದುಡ್ಡು, ಕಾಕಪಾಟಿಲನ ದುಡ್ಡು, ದಯಾನಂದನ ದುಡ್ಡು, 1/4ರಷ್ಟು ರಾಜಸ್ಥಾನಕ್ಕೆ, 1/4ರಷ್ಟು ಮಧ್ಯಪ್ರದೇಶಕ್ಕೆ, 1/4ರಷ್ಟು ತೆಲಂಗಾಣಕ್ಕೆ, 1/4 ರಷ್ಟು ಛತ್ತೀಸಘಡಕ್ಕೆ!! ಅವರಿಗೆ ವಿಧಾನಸೌಧ, ಜನರಿಗೆ ಲಾಲಬಾಗ್!” ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.