ವಿವೇಕವಾರ್ತೆ;- ಸಂಸದ ತೇಜಸ್ವಿ ಸೂರ್ಯ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ‘ಕಾರ್ ಪೂಲಿಂಗ್’ ಬಂದ್ ಮಾಡದಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದು, ಪತ್ರ ವಾಪಸ್ ಪಡೆಯಲು ಆಗ್ರಹಿಸಿದೆ.
ಈ ಸಂಬಂಧ ಮಾತನಾಡಿದ ಅವರು, ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ ಮಾಡಿ ಎಲ್ಲಾ ಕಾನೂನು ಬಾಹಿರ ಆಯಪ್ ಆಧಾರಿತ ಕಂಪನಿಗಳ ಮೇಲೆ ಕ್ರಮ ಜರುಗಿಸುವಂತೆ ನಾವು ಆಗ್ರಹಿಸಿದ್ದೆವು.
ಸಾರಿಗೆ ಸಚಿವರು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದರು. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಸಿಎಂಗೆ ಪತ್ರ ಬರೆದು ಕಾರ್ ಪೂಲಿಂಗ್ ನಿಷೇಧಿಸದಂತೆ ಆಗ್ರಹಿಸಿದ್ದಾರೆ. ತೇಜಸ್ವಿ ಸೂರ್ಯ ಸಂಸದ ಆಗುವ ಮೊದಲು ವಕೀಲರಾಗಿದ್ದರು. ಕಾನೂನು ದಿಕ್ಕರಿಸುವುದು ಅಪರಾಧ ಎನ್ನುವ ಸಾಮಾನ್ಯ ಜ್ಞಾನ ಕೂಡ ಅವರಿಗೆ ಇಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನಾವು ಪತ್ರ ಬರೆದಿದ್ದೆವೆ ಎಂದರು.
ಕಾರ್ ಪೂಲಿಂಗ್ ನಿಷೇಧಿಸದಂತೆ ಒತ್ತಾಯಿಸಲು ಮೋಹನ್ ದಾಸ್ ಪೈ ಎಂಬ ಉದ್ಯಮಿ ಸಂಸದರಿಗೆ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ, ಸಂಸದರು ಸಿಎಂಗೆ ಬರೆದಿರುವ ಪತ್ರ ವಾಪಾಸ್ ಪಡೆಯಲು ನಾವು 4 ದಿನಗಳ ಕಾಲಾವಕಾಶ ನೀಡುತ್ತೇವೆ. ಪತ್ರ ವಾಪಾಸ್ ಪಡೆಯದಿದ್ದರೆ ಜಯನಗರದ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಇಲ್ಲದಿದ್ದರೆ ಸಂಸದರ ಮುಂದೆ ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದರು.
ಅನುಮತಿ ಪಡೆಯದೆ ಪೂಲಿಂಗ್ ಮಾಡಿ ಯಾರಿಗೆ ಏನಾದರು ಸಂಭವಿಸಿದರೆ ಜನರಿಗೆ ಇನ್ಸೂರೆನ್ಸ್ ಯಾರು ಕೊಡ್ತಾರೆ. ಸರ್ಕಾರ ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸಿ ಕಾರ್ ಪೋಲಿಂಗ್ ಗೆ ಅವಕಾಶ ಕೊಟ್ರೆ ಸರ್ಕಾರದ ವಿರುದ್ಧ ಕೂಡ ಪ್ರತಿಭಟನೆ ಮಾಡ್ತೀವಿ. ಹಾಗೇನಾದರೂ ಕಾರ್ ಪೂಲಿಂಗ್ ಗೆ ಅವಕಾಶ ಕೊಡುವುದಾದರೆ ನಮಗೂ ಕೊಡಿ, ನಾವೂ ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.