ವಿವೇಕ ವಾರ್ತೆ : ನಾವು ಯಾವುದೇ ಅಡುಗೆ ಮಾಡಲು ಎಣ್ಣೆ ಬೇಕೇ ಬೇಕು. ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಎಣ್ಣೆ ಪಾತ್ರ ದೊಡ್ಡದು. ರುಚಿಗಷ್ಟೇ ಅಲ್ಲ ಹಿತ-ಮಿತವಾಗಿ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೂ ಸಾಕಷ್ಟು ಲಾಭಗಳಿದೆ.
ಆದರೆ ಎಷ್ಟೋ ಜನ ಕುರುಕಲು ತಿಂಡಿಗೆ ಬಳಸಿದ ಎಣ್ಣೆ ಅಥವಾ ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಮತ್ತೆ ಬಳಸುತ್ತಾರೆ. ಆದರೆ ಒಮ್ಮೆ ಅಡುಗೆ ಮಾಡಲು ಬಳಸಿದ ಎಣ್ಣೆಯನ್ನು ಮತ್ತೆ ಮರು ಬಳಕೆ ಮಾಡುವುದು ಒಳ್ಳೆಯದೇ ಅಥವಾ ಕೆಟ್ಟದ್ದೆ ಅಂತ ತಿಳಿಯೋಣ ಬನ್ನಿ.
ಹೊಸದಾಗಿ ಬಳಸುವ ಅಡುಗೆ ಎಣ್ಣೆಗೂ ಮರುಬಳಕೆ ಮಾಡುವ ಅಡುಗೆ ಎಣ್ಣೆಗೂ ಬಹಳಷ್ಟು ವ್ಯತ್ಯಾಸ ಇರುತ್ತದೆ.
ಒಮ್ಮೆ ಉಪಯೋಗಿಸಿದ ಎಣ್ಣೆಯನ್ನು ಮತ್ತೊಮ್ಮೆ ಅಡುಗೆ ಮಾಡಲು ಬಳಸಿದರೆ ಅದರಲ್ಲಿ ಉತ್ಪತ್ತಿ ಆಗುವ ಕೆಲವೊಂದು ಹಾನಿಕಾರಕ ಅಂಶಗಳು ಅಡುಗೆ ಎಣ್ಣೆಯ ರುಚಿಯನ್ನು ಬದಲಾಯಿಸಿ ತಯಾರು ಮಾಡುವ ಆಹಾರದ ಸ್ವಾದವನ್ನು ಹದಗೆಡಿಸುತ್ತವೆ.
ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸಲು ಮುಂದಾದರೆ ಅಡುಗೆ ಎಣ್ಣೆಯಲ್ಲಿ ಹಲವಾರು ರಾಸಾಯನಿಕ ಪ್ರಕ್ರಿಯೆಗಳು ಉಂಟಾಗಿ ನಮ್ಮ ದೇಹದ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಬಹುದು.
ಕ್ಯಾನ್ಸರ್ ಸಮಸ್ಯೆ ಜೊತೆಗೆ ಅತೆರೋಸ್ಕ್ಲೇರೋಸಿಸ್ ಸಮಸ್ಯೆಯನ್ನು ತಂದೊಡ್ಡಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಪ್ರಮಾಣವನ್ನು ಏರಿಕೆ ಮಾಡಿ ಹೃದಯದ ಅಪಧಮನಿಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತದೆ. ಇದರಿಂದ ರಕ್ತ ಸಂಚಾರ ಕಡಿಮೆ ಆಗಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗುತ್ತದೆ.
ದೇಹದಲ್ಲಿ ಫ್ರೀ ರಾಡಿಕಲ್ ಗಳ ಹಾವಳಿ ಹೆಚ್ಚಾದಷ್ಟು ಆರೋಗ್ಯಕರ ಜೀವ ಕೋಶಗಳ ಸಂತತಿ ಕಡಿಮೆ ಆಗುತ್ತದೆ ಮತ್ತು ಅವುಗಳ ಕಾರ್ಯ ಚಟುವಟಿಕೆ ತಗ್ಗುತ್ತದೆ. ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡಲು ಮತ್ತೊಮ್ಮೆ ಬಿಸಿ ಮಾಡಿದರೆ ಅದರಲ್ಲಿ ಫ್ರೀ – ರಾಡಿಕಲ್ ಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.
ಮರು ಬಳಕೆ ಮಾಡಿದ ಎಣ್ಣೆಯನ್ನು ಬಿಸಿ ಮಾಡಿದಾಗ ಅದರಲ್ಲಿರುವ ಟ್ರಾನ್ಸ್ ಪ್ಯಾಟಿ ಆಮ್ಲಗಳು ತಮ್ಮ ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ. ಇವುಗಳು ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಅಂಶಗಳಿಗೆ ಹೋಲಿಸಿದರೆ ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಮಿತಿ ಮೀರಿ ಹೆಚ್ಚು ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ನಮ್ಮ ಆರೋಗ್ಯಕ್ಕೆ ಕೆಟ್ಟ ದುಷ್ಪರಿಣಾಮಗಳನ್ನು ಉಂಟು ಮಾಡುತ್ತವೆ.