ವಿವೇಕವಾರ್ತೆ : ಬೆಂಗಳೂರಿನ ಸದಾಶಿವನಗರ ಠಾಣೆಯ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಹಿಡಿಯಲು ಹೋದ ವೇಳೆ ಆತ ಚಾಕು ಇರಿದ ಘಟನೆ ನಡೆದಿದೆ.
ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಎಂಬುವರಿಗೆ ಚಾಕು ಇರಿಯಲಾಗಿದೆ. ಹಸನ್ ಖಾನ್ ಎಂಬಾತ ಚಾಕು ಇರಿದ ಆರೋಪಿಯಾಗಿದ್ದಾನೆ.
ಹಸನ್ ಖಾನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಸಿಸಿಬಿಯ ಓ.ಸಿ.ಡಬ್ಲ್ಯೂ ವಿಭಾಗದ ಸಿಬ್ಬಂದಿ ಸೂಚನೆ ಮೇರೆಗೆ ಆರೋಪಿಯ ಅರೆಸ್ಟ್ ಮಾಡಲು ಸೈಯದ್ ಸಮೀವುಲ್ಲಾ ಹೋಗಿದ್ದರು.
ಹೆಚ್.ಕೆ.ಪಿ ದರ್ಗಾದ ಸರ್ಕಲ್‌ನ ಗೂಡ್ಸ್ ಆಟೋ ಸ್ಟ್ಯಾಂಡ್ ಬಳಿ ನಿಂತಿದ್ದ ಹಸನ್ ಖಾನ್’ನ್ನು ಹಿಡಿಯಲು ಸೈಯದ್ ಸಮೀವುಲ್ಲಾ ತೆರಳಿದ್ದಾರೆ.
ಇದನ್ನು ಕಂಡ ಆರೋಪಿ ತನ್ನ ಬಳಿ ಇದ್ದ ಚೂರಿಯನ್ನು ತೋರಿಸಿದ್ದಾನೆ. ಇದಕ್ಕೆ ಹೆಡ್ ಕಾನ್ಸ್‌ಟೇಬಲ್ ಜಗ್ಗದೆ ಇದ್ದಾಗ ಸಾರ್ವಜನಿಕರ ಎದುರೇ ಚಾಕು ಇರಿದು, ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಬಳಿಕ ಸ್ಥಳೀಯರ ನೆರವಿನಿಂದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬಚಾವ್ ಆಗಿದ್ದಾರೆ.
ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.