ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದು ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಪಕ್ಕಾ ಆಗಿದೆ. ಈ ಬಗ್ಗೆ ಆರ್ಸಿಬಿ ತಂಡದ ಮೂಲಗಳೇ ಸ್ಪಷ್ಟನೆ ನೀಡಿವೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್ನಲ್ಲಿ ನಡೆಯಲಿರೋ 2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು. ಫಾಫ್ ಡುಪ್ಲೆಸಿಸ್ಗೆ ಕೊಕ್ ನೀಡಿ ರಾಹುಲ್ಗೆ ಕ್ಯಾಪ್ಟನ್ಸಿ ನೀಡಬೇಕು ಅನ್ನೋದು ಆರ್ಸಿಬಿ ಪ್ಲಾನ್.
ಈ ಹಿಂದೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆ.ಎಲ್ ರಾಹುಲ್ ಮತ್ತೆ ತವರು ತಂಡದ ಪರ ಕಣಕ್ಕಿಳಿಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತಾನಾಡಿದ ಕೆಎಲ್ ರಾಹುಲ್, ಆರ್ಸಿಬಿ ಪರ ಆಡಬೇಕೆಂಬ ತಮ್ಮ ಮನದಾಳದ ಆಸೆಯನ್ನು ತೆರೆದಿಟ್ಟಿದ್ದಾರೆ.
ನಾನು ಮೊದಲು ಕರ್ನಾಟಕದ. ಅದರಲ್ಲೂ ಬೆಂಗಳೂರಿನವ. ಇದನ್ನೂ ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು. ಪ್ರತಿಯೊಬ್ಬ ಆಟಗಾರ ಕೂಡ ತನ್ನ ತವರು ತಂಡದ ಪರ ಆಡಲು ಬಯಸುತ್ತಾರೆ. ಹೀಗಾಗಿ ನಾನು ಸಹ ಬೆಂಗಳೂರು ಪರ ಆಡುವುದು ಸೂಕ್ತ. ನನ್ನ ನಗರದ ಪರ ಆಡುವುದು ನನ್ನ ಕನಸಾಗಿತ್ತು. ಈ ಹಿಂದೆ ನಾನು ಆರ್ಸಿಬಿ ಪರ ಆಡಿದ್ದೇನೆ. ಈಗ ಮತ್ತೆ ಅದೇ ತಂಡದಲ್ಲಿ ಆಡಲು ಸಾಧ್ಯವಾದರೆ ಆಡುತ್ತೇನೆ ಎಂದಿದ್ದಾರೆ.