ವಿವೇಕ ವಾರ್ತೆ : ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಕೇವಲ ಎರಡು ತಿಂಗಳ ಅಂತರದಲ್ಲಿ ವಿಷ ಸರ್ಪವೊಂದು ಒಂದಲ್ಲಾ, ಎರಡಲ್ಲಾ ಬರೋಬ್ಬರಿ 9 ಬಾರಿ ಕಚ್ಚಿದೆ.
ಆದರೆ ಒಂಬತ್ತು ಸಾರಿ ವಿಷ ಸರ್ಪ ಕಚ್ಚಿದರು ಬಾಲಕ ಮಾತ್ರ ಪವಾಡವೆಂಬಂತೆ ಸಾವನನ್ನೇ ಗೆದ್ದಿದ್ದಾರೆ.
ಜಿಲ್ಲೆಯ ಹಲಕರ್ಟಿ ಗ್ರಾಮದ ವಿಜಯಕುಮಾರ್ ಮತ್ತು ಉಷಾ ದಂಪತಿಗಳ ಪುತ್ರನಾದ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ (15) ಎಂಬವನೇ ಹಾವೂ ಕಡಿತಕ್ಕೆ ಒಳಗಾದ ಬಾಲಕ.
ಕಳೆದ ಜುಲೈ 3 ರಂದು ಮನೆಯ ಹಿಂಭಾಗ ಮೂತ್ರ ವಿಸರ್ಜನೆಗೆಂದು ಹೋದಾಗ ಕಣ್ಣುತಪ್ಪಿ ಹಾವಿನ ಬಾಲವನ್ನು ತುಳಿದಿದ್ದಾನೆ. ಆಗ ಹಾವು ಆತನಿಗೆ ಕಚ್ಚಿದೆ, ವಿಷಯ ತಿಳಿದ ತಕ್ಷಣ ಪೋಷಕರು ವಾಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಿಂದ ಅಂದು ಜೀವಾಪಾಯದಿಂದ ಪಾರಾಗಿದ್ದ.
ಇದಾದ ಕೇವಲ ಮೂರೇ ದಿನಕ್ಕೆ ಮನೆ ಹೊರಗಡೆ ಆಟ ಆಡುತ್ತಿದ್ದಾಗ ಪ್ರಜ್ವಲಗೆ ಮತ್ತೆ ಹಾವು ಕಚ್ಚಿದೆ. ನಂತರ ಜುಲೈ 12, 22ರಂದು ಸಹ ಹಾವು ಕಚ್ಚಿದೆ.
ಪ್ರಜ್ವಲ್ಗೆ ಹಾವಿನ ಕಾಟ ಇಷ್ಟಕ್ಕೆ ತಪ್ಪಲಿಲ್ಲ. ಇದಾದ ಸ್ವಲ್ಪ ದಿನಕ್ಕೆ ಮತ್ತೆ ಹಾವಿನ ದ್ವೇಷ ಶುರುವಾಗಿದ್ದು, ಮತ್ತೆ ಅದೇ ಹಾವೂ ಆಗಸ್ಟ್ 4, ಆಗಸ್ಟ್ 27 ರಂದು ಮನೆಯಲ್ಲಿ ಮಲಗಿದಾಗ ಹಾವು ಕಚ್ಚಿದೆ. ಹೀಗೆ ಕೇವಲ ಎರಡೇ ಎರಡು ತಿಂಗಳುಗಳ ಅಂತರದಲ್ಲಿ ಬಾಲಕನ ಕೈ-ಕಾಲು ಸೇರಿ ವಿವಿಧಡೆ ಒಟ್ಟು 9 ಬಾರಿ ವಿಷ ಸರ್ಪ ಕಚ್ಚಿದೆ. ಅದೃಷ್ಟವಶಾತ್ ಇಷ್ಟು ಸಲ ಹಾವೂ ಕಚ್ಚಿದರೂ ಪ್ರಜ್ವಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಹಾವಿನಿಂದ ಒಂಬತ್ತು ಬಾರಿ ಕಡಿತಕ್ಕೆ ಒಳಗಾದ ಪ್ರಜ್ವಲ್ಗೆ ಆರು ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇನ್ನು ಮೂರು ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ.
ಇಷ್ಟಾದರೂ ಗೋಧಿ ಬಣ್ಣದ ಸರ್ಪ ಮಾತ್ರ ಪ್ರಜ್ವಲ್ ಮತ್ತು ಆತನ ಕುಟುಂಬವನ್ನು ಬೆನ್ನು ಬಿಡದೆ ಕಾಡಿದೆ. ಸದ್ಯ ಪ್ರಜ್ವಲ್ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಚಿತ್ರ ಏನು ಗೋತ್ತೆ ? : ಹಾವು ಮಾತ್ರ ಪಾಲಕರಿಗಾಗಲಿ ಅಥವಾ ಕುಟುಂಬಸ್ಥರಿಗಾಗಲಿ ಕಾಣಿಸಿಕೊಳ್ಳುತ್ತಿಲ್ಲ. ಕೇವಲ ಬಾಲಕನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಪಾಲಕರು ಊರು ಬಿಟ್ಟು ಬೇರೆ ಊರಿಗೂ ಹೋದರು ಈ ಹಾವಿನ ಕಾಟ ತಪ್ಪಿಲ್ಲ, ಹೀಗಾಗಿ ಇದೊಂದು ಘಟನೆ ಸಿನಿಮೀಯ ರೀತಿಯಲ್ಲಿರುವುದರಿಂದ ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.