ವಿವೇಕವಾರ್ತೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಸೂಳೆಕೆರೆಯಲ್ಲಿ ತಾಯಿಯೊಬ್ಬಳು 5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಕವಿತಾ (27) ಹಾಗೂ ನಿಹಾರಿಕಾ (5) ಎಂದು ತಿಳಿದುಬಂದಿದೆ.
ಮೃತ ಕವಿತಾ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರ ಪತ್ನಿ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಮಗಳೊಂದಿಗೆ ನಿಹಾರಿಕಾಳೊಂದಿಗೆ ಕವಿತಾ ಕಾಣೆಯಾಗಿದ್ದರು. ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪತಿ ಮಂಜುನಾಥ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ ಇಂದು ಕೆರೆಯಲ್ಲಿ ತಾಯಿ ಹಾಗೂ ಮಗಳ ಶವ ಪತ್ತೆಯಾಗಿದೆ. ಇನ್ನು ಕವಿತಾ ಕೆರೆಗೆ ಹಾರುವ ಮುನ್ನ ಮಗಳು ನಿಹಾರಿಕಾ ದುಪ್ಪಟ್ಟಾದಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದರು ಎನ್ನಲಾಗಿದೆ.
ಇನ್ನೂ ಪತಿ ಹಾಗೂ ಕುಟುಂಬಸ್ಥರು ಕವಿತಾಗೆ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕಾರಣದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕವಿತಾಳ ತವರು ಮನೆಯವರು, ನಮ್ಮ ಮಗಳಿಗೆ ಕಿರುಕುಳ ನೀಡಲಾಗಿದೆ ಎಂದು ಆಕೆಯ ಗಂಡ ಹಾಗೂ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.