ವಿವೇಕ ವಾರ್ತೆ : ನಗರದ ಮಹಿಳಾ ಪಿಯು ಕಾಲೇಜು ಎದುರು ಯುವಕನೊಬ್ಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು, ಕಾರಿನಲ್ಲಿ ಅಪಹರಿಸಿರುವ ಘಟನೆ ನಡೆದಿದೆ.
ಕನಕಪುರದ ದಾಳಿಂಬ ಗ್ರಾಮದ ನಿವಾಸಿ ಸಂಜನಾ ಎಂದಿನಂತೆ ಬೆಳಿಗ್ಗೆ 9.15ರ ಸುಮಾರಿಗೆ ಸಹಪಾಠಿಗಳೊಂದಿಗೆ ಕಾಲೇಜಿಗೆ ತೆರಳುತ್ತಿದ್ದರು.
ಯುವತಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ, ಕಾರಲ್ಲಿ ಬಂದ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಕುಸಿದ ಯುವತಿಯನ್ನು ಕಾರಿನೊಳಕ್ಕೆ ಎಳೆದುಕೊಂಡು ಪರಾರಿಯಾಗಿದ್ದಾರೆ.
ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾನೆ. ಆದರೂ, ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಘಟನೆಯನ್ನು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದು ಅಪಹರಣಕಾರರ ಪತ್ತೆಗೆ ಬಲೆ ಬೀಸಿದರು.
ಇನ್ನು ಚಾಕು ಇರಿದು ಅಪಹರಣ ಮಾಡಿದ ಯುವಕನನ್ನು ದಾಳಿಂಬ ಗ್ರಾಮದ ಚೇತನ್ ಎಂದು ಗುರುತಿಸಲಾಗಿದೆ. ಚಾಕು ಇರಿದ ನಂತರ ತೀವ್ರವಾಗಿ ಗಾಯಗೊಂಡಿದ್ದ ಸಂಜನಾಳನ್ನು ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಮಾಹಿತಿ ತಿಳಿದ ಪೊಲೀಸರು ಚಾಕು ಇರಿದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.