ವಿವೇಕ ವಾರ್ತೆ : ಒಂದೇ ಕುಟುಂಬದ ನಾಲ್ವರು ಸೊಳ್ಳೆ ನಿವಾರಕ ರಿಪಲೆಂಟ್ ಮಶಿನ್ನಿಂದಾಗಿ ಮೃತಪಟ್ಟ ಘಟನೆ ಚೆನ್ನೈನ ಮನಾಲಿಯಲ್ಲಿರುವ ಮಥುರ್ ಎಂಎಂಡಿಯ ಏರಿಯಾದಲ್ಲಿ ಇಂದು (ಆ. 19) ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಮೃತರು ಸಂತಾನಲಕ್ಷ್ಮೀ ಮತ್ತು ಆಕೆಯ ಮೂವರು ಮಕ್ಕಳಾದ ಸಂಧ್ಯಾ (10), ಪ್ರಿಯಾ ರಕ್ಷಿತಾ (8) ಮತ್ತು ಪವಿತ್ರಾ (8) ಎಂದು ವರದಿಯಾಗಿದೆ.
ಒಡೆಯ ಎಂಬುವರು ಆನ್ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬೈಕ್ ಓಡಿಸುವಾಗ ಅವರ ಕಾಲಿಗೆ ಏಟು ಬಿದ್ದು ಗಾಯಗೊಂಡರು. ಬಳಿಕ ಅವರನ್ನು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ನೋಡಿಕೊಳ್ಳಲೆಂದು ಪತ್ನಿ ಆಸ್ಪತ್ರೆಗೆ ಬಂದಿದ್ದರು. ಆಕೆಯ ತಾಯಿ, ಮನೆಯಲ್ಲಿದ್ದ ಮೂವರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
ಮೂವರು ಮಕ್ಕಳು ರಾತ್ರಿ ಅಜ್ಜಿಯೊಂದಿಗೆ ಮಲಗಿದ್ದರು. ಅವರಿದ್ದ ಏರಿಯಾದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರಿಂದ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್ ಅನ್ನು ಆನ್ ಮಾಡಿ ಮಲಗಿದ್ದರು. ಗಾಢ ನಿದ್ರೆಯಲ್ಲಿ ಇರುವಾಗ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್ ಓವರ್ಹೀಟ್ನಿಂದ ಮೆಲ್ಟ್ ಆಗಿ ಹತ್ತಿರದಲ್ಲಿ ಇದ್ದ ಕಾರ್ಡ್ಬೋರ್ಡ್ ಬಾಕ್ಸ್ ಮೇಲೆ ಬಿದ್ದಿದೆ. ಇದರಿಂದ ಉಂಟಾದ ಹೊಗೆಯಿಂದ ಉಸಿರಾಡಲು ಆಗದೇ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಬೆಳಗ್ಗೆ ಕಿಟಕಿಗಳಿಂದ ಹೊಗೆ ಆಚೆ ಬರುತ್ತಿರುವುದನ್ನು ನೆರೆಯವರು ಗಮನಿಸಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ನಾಲ್ವರು ಮೃತಪಟ್ಟಿರುವು ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಆ ಏರಿಯಾ ಜನರು ಆತಂಕಗೊಂಡಿದ್ದಾರೆ.
ಇತ್ತ ಆಸ್ಪತ್ರೆಯಲ್ಲಿರುವ ಒಡೆಯ ಮತ್ತು ಆತನ ಪತ್ನಿಗೆ ಈ ಸುದ್ದಿ ಬರ ಸಿಡಿಲು ಬಡಿದಂತಾಗಿದೆ. ಇನ್ನು ಈ ಘಟನೆಗೆ ಸೊಳ್ಳೆ ನಿವಾರಕ ರಿಪಲೆಂಟ್ ಮೆಶಿನ್ ಕಾರಣ ಎಂದು ಮೇಲ್ನೋಟಕ್ಕೆ ಕಂಡರೂ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದು ಕೂಡ ಸಂಭಾವ್ಯ ಕಾರಣ ಆಗಿರಬಹುದೆಂದು ತಿಳಿಸಿದ್ದಾರೆ. ಅಲ್ಲದೆ, ಮನೆಯಲ್ಲಿ ಬಳಸದ ಸಿಲಿಂಡರ್ ಸಹ ಇತ್ತೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. (ಏಜೆನ್ಸೀಸ್)