ವಿವೇಕ ವಾರ್ತೆ : ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಕ್ವಾಲಿಸ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ನಾಗೇಶ್, ಜ್ಯೊರ್ತಿಲಿಂಗ, ಪುಟ್ಟರಾಜು, ಕುಮಾರ, ಗೋವಿಂದ ಮೃತ ವ್ಯಕ್ತಿಗಳು ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ, ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೂ ತೀವ್ರ ಗಾಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿದ್ದ 12ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.
ಭೀಕರ ಅಪಘಾತದ ಪರಿಣಾಮ ಬಸ್ ನ ಮುಂಭಾಗಕ್ಕೆ ಕಚ್ಚಿಕೊಂಡಿದ್ದ ಕ್ವಾಲಿಸ್ ಕಾರನ್ನು ಅಗ್ನಿಶಾಮಕ ಸಿಬ್ಬಂದಿಯು ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬೇರ್ಪಡಿಸಿದ್ದಾರೆ.
ಸಾತನೂರು ಬಳಿಯ ಕೆಮ್ಮಾಳೆ ಗೇಟ್ ಬಳಿ ಈ ಅಪಘಡ ಸಂಭವಿಸಿದ್ದು, ಕ್ವಾಲಿಸ್ ಕಾರಿನಲ್ಲಿದ್ದವರು ಮಹದೇಶ್ವರ ಬೆಟ್ಟದಿಂದ ವಾಪಾಸ್ಸಾಗುತ್ತಿದ್ದರು ಎಂದು ವರದಿಯಾಗಿದೆ.
ಮೃತ ಆರು ಮಂದಿ ಬೆಂಗಳೂರು ಮೂಲದ ನಿವಾಸಿಗಳು. ಕೆಲವರು ವಿಧಾನಸೌಧದಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಾತನೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.