ವಿವೇಕವಾರ್ತೆ : ರಾಷ್ಟ್ರೀಯ ಹೆದ್ದಾರಿ 52ರ ಪಕ್ಕದಲ್ಲಿ ನಿಂತವರ ಮೇಲೆ ಲಾರಿಯೊಂದು ಹರಿದು ಸ್ಥಳದಲ್ಲೆ ನಾಲ್ವರು ಬೈಕ್ ಸವಾರರರು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಹಿಟ್ನಳ್ಳಿ ಟೋಲ್ ನಾಕಾ ಬಳಿ ನಡೆದಿದೆ.
ವಿಜಯಪುರ ನಗರದ ಹೊರವಲಯದ ಸೋಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 52ರ ವಿಜಯಪುರ ಹಿಟ್ನಳ್ಳಿ ಟೋಲ್ ನಾಕಾ ಬಳಿ ತಡ ರಾತ್ರಿ ಲಾರಿ ಹರಿದು ನಾಲ್ವರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ.
ಸಾವಿಗೀಡಾದ ದುರ್ದೈವಿ ಯುವಕರನ್ನು ವಿಜಯಪುರ ವಜ್ರಹನುಮಾನ ನಗರ ನಿವಾಸಿಗಳಾದ ಪ್ರವೀಣ ಪಾಟೀಲ(31), ಶಿವಾನಂದ ಚೌಧರಿ ( 24), ಈರಣ್ಣ ಕೋಲ್ಹಾರ( 26) ಮತ್ತು ಸುನೀಲ ಖಾನಾಪೂರ ( 26) ಎಂದು ಗುರುತಿಸಲಾಗಿದೆ.
ಜಿಲ್ಲೆಯ ಚಡಚಣ ಮೂಲದ ಚಾಲಕ ಸೂರಜ್ ಶಿಂಧೆ ಎಂಬಾತ ಕಂಟೇನರ್ ಲಾರಿ (ಎಂ.ಎಚ್. 12/ಕ್ಯೂಡಬ್ಲ್ಯು 852) ಯನ್ನು ವಿಜಯಪುರ ಕಡೆಯಿಂದ ಆಲಮಟ್ಟಿ ಕಡೆಗೆ ವೇಗವಾಗಿ ಮತ್ತು ಅಜಾಗೃತವಾಗಿಯಾಗಿ ಚಲಾಯಿಸಿಕೊಂಡು ಬಂದು, ರಾಷ್ಟ್ರೀಯ ಹೆದ್ದಾರಿ 52ರ ಪಕ್ಕದಲ್ಲಿ ಎರಡು ಬೈಕುಗಳಲ್ಲಿ ಮಾತನಾಡುತ್ತಾ ನಿಂತಿದ್ದವರ ಮೇಲೆ ಹತ್ತಿಸಿಕೊಂಡು ಹೋಗಿದ್ದಾನೆ.
ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಗಾಯಾಳುಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.