ವಿವೇಕ ವಾರ್ತೆ : ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗೆ ಮೂತ್ರದ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಬಳಸಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಸದರ್ ಆಸ್ಪತ್ರೆಗೆ ಕರೆತರಲಾಯಿತು. ತಪಾಸಣೆಯ ನಂತರ ರೋಗಿಗೆ ಮೂತ್ರ ವಿಸರ್ಜಿಸಲು ಚೀಲವನ್ನು ನೀಡುವಂತೆ ಮತ್ತು ಇನ್ಸುಲಿನ್ ಚುಚ್ಚುಮದ್ದನ್ನು ನೀಡುವಂತೆ ವೈದ್ಯರು ತಿಳಿಸಿದ್ದಾರೆ.
ಆದರೆ, ಅಗತ್ಯ ಉಪಕರಣಗಳು ಮತ್ತು ಔಷಧಗಳ ಕೊರತೆಯ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ ಮೂತ್ರ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಜೋಡಿಸಿ ರೋಗಿಯ ಜೀವಕ್ಕೆ ಅಪಾಯ ತಂದೊಡ್ಡಿದ್ದಾರೆ.
ರೋಗಿಯ ಕುಟುಂಬದವರು ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಪಾಂಡೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಉಪಯೋಗವಾಗಲಿಲ್ಲ. ಅಂತಿಮವಾಗಿ ಪರಿಸ್ಥಿತಿ ತಿಳಿಗೊಳಿಸಿ ಮೂತ್ರ ಚೀಲ ಸೇರಿದಂತೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಯಿತು ಎಂದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ಯೂರಿನಲ್ ಬ್ಯಾಗ್‌ಗಳ ಕೊರತೆಯ ಬಗ್ಗೆ ತನಗೆ ತಿಳಿದಿಲ್ಲ. ಮಾಹಿತಿ ಬಂದ ತಕ್ಷಣ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ವ್ಯಕ್ತಿ ಕಾಲು ಮುರಿತಕ್ಕೆ ಒಳಗಾಗಿದ್ದರು. ಅಗತ್ಯವಿರುವ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಪಾಂಡೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.