ವಿವೇಕವಾರ್ತೆ : ಕೆಎಸ್ಆರ್ಟಿಸಿ ಬಸ್ ಹಾಗೂ ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಟಾಟಾ ಸುಮೋ ವಾಹನದಲ್ಲಿದ್ದ 5 ಮಂದಿ ಭೀಕರ ದುರ್ಮರಣಕ್ಕೀಡಾಗಿ, ನಾಲ್ವವರಿಗೆ ಗಂಭೀರ ಗಾಯಗಳಾಗಿವೆ.
ಈ ದುರ್ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರ ವಲಯ ಗದ್ದಿಹಳ್ಳದ ಬಳಿ ಬಳಿ ನಡೆದಿದೆ.
ಮೃತರು ಗುಲಬರ್ಗಾ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಿ ಗ್ರಾಮದವರು ಎಂದು ತಿಳಿದುಬಂದಿದ್ದು, ಗದಗ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಮಠಕ್ಕೆ ಹೋಗುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೃತರ ಹೆಸರುಗಳು ಇನ್ನಷ್ಟೇ ತಿಳಿದು ಬರಬೇಕಿದೆ.
ಗಜೇಂದ್ರಗಡ ಕಡೆಯಿಂದ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಹೊರಟಿದ್ದ ಟಾಟಾ ಸೊಮೊ ಹಾಗೂ ಗದಗ ನಗರದಿಂದ ಗಜೇಂದ್ರಗಡ ಕಡೆಗೆ ಹೊರಟಿದ್ದ ಬಸ್ ನಡುವೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಟಾಟಾ ಸೊಮೊ ನಲ್ಲಿದ್ದ 5 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ವಾಯುವ್ಯ ಸಾರಿಗೆ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಅಪಘಾತ ಘಟನೆಯಿಂದ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಟ್ರಾಫಿಕ್ ಜಾಮ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋ ಸಂಪೂರ್ಣ ಜಖಂ ಆಗಿದ್ದು, ಮೃತ ದೇಹಗಳನ್ನು ಹೊರಗೆ ತೆಗೆಯಲು ಪರದಾಡುತ್ತಿದ್ದಾರೆ. ಪ್ರವಾಸಕ್ಕೆ ಬಂದವರ ಬ್ಯಾಗ್ ಹಾಗೂ ಇತರೆ ಆಧಾರಗಳ ಮೂಲ ಅವರ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇನ್ನು ಮೊಬೈಲ್‌ಗೆ ಕರೆ ಮಾಡುವವರಿಂದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.