ವಿವೇಕವಾರ್ತೆ : : ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಿನ ‘ಜೈಲರ್’ ಸಿನಿಮಾದ ಮೂಲಕ ಭರ್ಜರಿ ಹಿಟ್ ಪಡೆದಿದ್ದು ಗೊತ್ತೇ ಇದೆ. ಈ ನಡುವೆ ಅವರು ಆಧ್ಯಾತ್ಮಿಕ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದು, ಇದರ ಭಾಗವಾಗಿ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದರು.
ಈ ವೇಳೆ ತಲೈವಾ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು, ಟ್ರೋಲ್‌ಗೆ ಕಾರಣವಾಗಿತ್ತು.
ಹೌದು.. ಲಕ್ನೋದಲ್ಲಿ ಸಿಎಂ ಆದಿತ್ಯನಾಥ್ ಮನೆ ಮುಂದೆ ರಜನೀಕಾಂತ್ ಕಾರಿನಿಂದ ಇಳಿದ ತಕ್ಷಣ ಸ್ವಾಗತಿಸಲು ಬಂದ ಯೋಗಿ ಜೀ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಂದಿನಿಂದ ಸಾಕಷ್ಟು ಟ್ರೋಲ್ ಮಾಡಲಾಗಿತ್ತು.
ರಜನಿಕಾಂತ್ ತನಗಿಂತ ಕಿರಿಯ ಯೋಗಿ ಅವರ ಕಾಲಿಗೆ ಬಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲರ್‌ಗಳು ಭಾರೀ ಗಲಾಟೆ ಎಬ್ಬಿಸಿದ್ದಾರೆ. ಮತ್ತೊಂದೆಡೆ ರಜನಿಕಾಂತ್ ಅವರ ಸರಳತೆ ಕಂಡು ಅವರ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್‌ಸ್ಟಾರ್ ತಮಗಿಂತ 20 ವರ್ಷ ಚಿಕ್ಕವರಾದ ಯೋಗಿ ಕಾಲು ಮುಟ್ಟಿದ್ದು ಸರಿಯಲ್ಲ ಅಂತ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಆದರೆ, ಇಂದು ಆಧ್ಯಾತ್ಮಿಕ ಪ್ರವಾಸ ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ರಜನಿಕಾಂತ್ ಸುದ್ದಿಗಾರರ ಜೊತೆ ಮಾತನಾಡುತ್ತ ಈ ಕುರಿತು ಪ್ರತಿಕ್ರಿಯೆ ನೀಡಿದರು. ನನಗಿಂತ ಕಿರಿಯ ಯಾರೇ ಆಗಲಿ, ಅವರು ಯೋಗಿಯಾಗಲಿ, ಸ್ವಾಮೀಜಿಯಾಗಲಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ನನ್ನ ಪರಿಪಾಠ’ ಎಂದು ತಮ್ಮದೇ ಶೈಲಿಯಲ್ಲಿ ಒಂದೇ ಮಾತಿನಲ್ಲಿ ಖಡಕ್ಕಾಗಿ ಹೇಳಿದರು. ಸದ್ಯ ರಜನಿಕಾಂತ್ ಹೇಳಿಕೆ ವೈರಲ್ ಆಗುತ್ತಿವೆ.
ಈ ನಡುವೆ ‘ಜೈಲರ್’ ಚಿತ್ರ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಿರ್ದೇಶಕ ನೆಲ್ಸನ್ ರಜನಿಕಾಂತ್ ಅವರನ್ನು ಸಿನಿಮಾದಲ್ಲಿ ತೋರಿಸಿರುವ ರೀತಿ, ಆಯಕ್ಷನ್, ಸ್ಟೈಲ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕೇವಲ ಹತ್ತು ದಿನದಲ್ಲಿ ರೂ.500 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದೆ.