ವಿವೇಕ ವಾರ್ತೆ : ತಿಳಿಗೇಡಿ ಪತಿಯೊಬ್ಬ ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಮಾಡಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇದೆ ಯೂಟ್ಯೂಬ್ ವಿಡಿಯೋ ತನ್ನ ಪತ್ನಿಯ ಸಾವಿಗೆ ಕಾರಣವಾಗಿರುವ ಹೃದಯವಿದ್ರಾವಕ ಘಟನೆಯಾಗಿದೆ.
ಮೃತ ದುರ್ದೈವಿ ಪತ್ನಿ ಎಂ. ಲೋಕನಾಯಕಿ (27) ಎಂದು ತಿಳಿದು ಬಂದಿದ್ದು, ಈಕೆ ಕೃಷ್ಣಗಿರಿ ಜಿಲ್ಲೆಯ ಪೊಚಂಪಲ್ಲಿ ಬಳಿಯ ಪುಲಿಂಪಟ್ಟಿ ಗ್ರಾಮದ ನಿವಾಸಿ ಮಾದೇಶ್ (30) ಎಂಬುವರ ಪತ್ನಿ.
ಲೋಕನಾಯಕಿ ಮಂಗಳವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಇದ್ದ ಗಂಡ ಮಾದೇಶ್, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮನೆಯಲ್ಲಿಯೇ ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡುವ ಪ್ರಯತ್ನಕ್ಕೆ ಕೈಹಾಕಿ ಹೆರಿಗೆಯನ್ನು ಸಹ ಮಾಡಿಸಿದ್ದಾನೆ.
ಆದರೆ, ಹೆರಿಗೆಯಾದ ಬೆನ್ನಲ್ಲೇ ಲೋಕನಾಯಕಿಗೆ ತೀವ್ರ ರಕ್ತಸ್ರಾವವಾಗಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೂಡಲೇ ಮಾದೇಶ್, ತನ್ನ ಪತ್ನಿ ಮತ್ತು ಮಗುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದನು. ಆದರೆ ಲೋಕನಾಯಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದು ಘೋಷಿಸಿದರು.
ವಿಷಯ ತಿಳಿದ ತಕ್ಷಣವೇ ವೈದ್ಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರು.
ಪತಿ ಮಾದೇಶ್ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಸದ್ಯ ಪೊಲೀಸರು ಅಸ್ವಾಭಾವಿಕ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)