ವಿವೇಕವಾರ್ತೆ : ರಾಮನಗರ ಜಿಲ್ಲೆಯ ಕನಕಪುರದಲ್ಲಿ ಯುವತಿ ಸ್ನಾನ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
25 ವರ್ಷದ ಯುವಕ ವಿಡಿಯೋ ಮಾಡಿದ ದುಷ್ಟ ಎಂದು ತಿಳಿದುಬಂದಿದೆ. ಹೀಗಾಗಿ ಪಕ್ಕದ ಮನೆಯ ಯುವಕನ ಮೇಲೆ ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಇದ್ದ ಯುವತಿ ತಾಯಿ ಮನೆಗೆ ಬಂದಿದ್ದರು. ಈ ವೇಳೆ ಸ್ನಾನ ಮಾಡಲೆಂದು ಬಾತ್‌ರೂಮಿಗೆ ಹೋಗಿದ್ದರು. ಸ್ನಾನಕ್ಕೂ ಮೊದಲು ಬಾತ್‌ರೂಮಿನ ಕಿಟಕಿಯನ್ನು ಮುಚ್ಚಿದ್ದರು. ಸ್ನಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಾತ್ ರೂಮಿನ ಕಿಟಕಿ ತೆರದಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಭಯಗೊಂಡ ಯುವತಿ ಕಿಟಕಿ ಬಳಿ ಬಂದು ನೋಡಿದಾಗ ಈ ಕಿರಾತಕ ಯುವಕ ಮೊಬೈಲ್ ಹಿಡಿದು ರೆಕಾರ್ಡ್ ಮಾಡುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ.
ಕೂಡಲೇ ಯುವತಿ ಚೀರಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿ ಓಡಿ ಬಂದ ಕುಟುಂಬಸ್ಥರಿಗೆ ವಿಷಯವನ್ನು ಮುಟ್ಟಿಸಿದ್ದಾಳೆ. ಎಸ್ಕೇಪ್ ಆಗುತ್ತಿದ್ದ ಯುವಕನನ್ನು ಪೋಷಕರು ಹಿಡಿದು ಥಳಿಸಿದ್ದಾರೆ. ಈ ಯುವಕ ಸಿಸಿಟಿವಿ ಅಳವಡಿಸುವ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಯುವಕನ ವಿರುದ್ಧ ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ. ಕನಕಪುರ ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ವಿಚಾರಣೆ ವೇಳೆ ಸ್ನಾನದ ವಿಡಿಯೋವನ್ನು ಡಿಲೀಟ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ.
ಈ ಸಂಬಂಧ ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.