ವಿವೇಕ ವಾರ್ತೆ: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಬಳಿಯ ವರವಣಿ ಗ್ರಾಮದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ರವಿಶಂಕರ್ ಹಾಗೂ ಜಯಂತಮ್ಮ ದಂಪತಿಯ ಒಬ್ಬಳೇ ಮಗಳು ಶೀಲಾ (22) ಆಗಸ್ಟ್ 14ರಂದು ಮನೆಯಲ್ಲಿ ಸಾವನ್ನಪ್ಪಿದ್ದಳು.
ಮಗಳು ಅನಾರೋಗ್ಯದ ಕಾರಣ ಕಾಲೇಜಿಗೆ ಹೋಗಿಲ್ಲ, ಅನಾರೋಗ್ಯದಿಂದಲೇ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ರವಿಶಂಕರ್ ದೂರಿನಲ್ಲಿ ತಿಳಿಸಿದ್ದರು.
ಶೀಲಾ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಶೀಲಾಳ ತಾಯಿ ಜಯಂತಮ್ಮನವರ ಸಹೋದರಿಯರು ಶೀಲಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ತಂದೆಯೇ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಾಯಿ ಹಾಗೂ ಮಗಳಿಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದ. ಅಲ್ಲದೇ ರವಿಶಂಕರ್ ಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವೂ ಇದೆ. ಇದನ್ನು ಮಗಳು ಸದಾ ವಿರೋಧಿಸುತ್ತಿದ್ದಳು. ಹೀಗಾಗಿ ಮಗಳನ್ನು ಕಂಡರೆ ತಂದೆಗೆ ಆಗುತ್ತಿರಲಿಲ್ಲ. ಅಲ್ಲದೇ ಶೀಲಾ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದಿಂದ ರವಿಶಂಕರ್ ಪದೇಪದೇ ಮಗಳಿಗೆ ಹೊಡೆಯೋದು, ಬಡಿಯೋದು ಮಾಡುತ್ತಿದ್ದ. ಮಗಳು ಕದ್ದು ಮುಚ್ಚಿ ಫೋನ್ ಬಳಸುತ್ತಿರುವುದನ್ನು ನೋಡಿ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಶೀಲಾಳ ಸಂಬಂಧಿಕರು ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್‌ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೂ ಪತ್ರ ಬರೆದಿದ್ದಾರೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 174 ಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಶೀಲಾಳ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಬಯಲಾಗಲಿದೆ.