ವಿವೇಕ ವಾರ್ತೆ : ಮನೆಯಲ್ಲಿ ಇರಿಸಲಾಗಿದ್ದ ಫ್ರಿಡ್ಜ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಂತರ ಸ್ಫೋಟ ಸಂಭವಿಸಿ ಇಬ್ಬರು ಸಜೀವವಾಗಿ ದಹನಗೊಂಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್‌ಪುರ ಬಳಿ ನಡೆದಿದೆ.
ಮೃತರು ರಿಚಾ (20) ಮತ್ತು ರಿಂಕು (20) ಎಂದು ವರದಿಯಾಗಿದೆ.
ರಿಚಾ ಮೂರು ತಿಂಗಳ ಹಿಂದೆ ಪರಮಾನಂದಪುರ ನಿವಾಸಿ ನೀರಜ್ ಎಂಬಾತನ ಜತೆಗೆ ವಿವಾಹವಾಗಿದ್ದು, ರಿಂಕು ಈತನ ಸಹೋದರಿಯಾಗಿದ್ದಾಳೆ.
ಮನೆಯಲ್ಲಿ ಆತನ ತಾಯಿ ಸೇರಿ ಮೂವರು ವಾಸಿಸುತ್ತಿದ್ದು, ಮದುವೆಯಾದ ಕೆಲವು ದಿನಗಳ ನಂತರ ನೀರಜ್ ಸೂರತ್‌ಗೆ ತೆರಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ನೀರಜ್ ಮನೆಯಲ್ಲಿ ಶನಿವಾರ ರಾತ್ರಿ ರೆಫ್ರಿಜರೇಟರ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಫ್ರಿಡ್ಜ್ ಸ್ಫೋಟಗೊಂಡಿದೆ. ಇದರಿಂದಾಗಿ ಬೆಂಕಿಯ ಜ್ವಾಲೆ ಮನೆಯೆಲ್ಲ ವ್ಯಾಪಿಸಿದ್ದು, ಅದರ ಹಿಡಿತಕ್ಕೆ ಬಂದ ರಿಚಾ ಮತ್ತು ರಿಂಕು ಸಜೀವವಾಗಿ ದಹನವಾಗಿದ್ದಾರೆ. ಘಟನೆ ವೇಳೆ ಮನೆಯಲ್ಲಿ ಮೂವರು ಮಾತ್ರ ಇದ್ದು, ಮೃತರು ಒಂದು ಕೋಣೆಯಲ್ಲಿದ್ದರೆ, ನೀರಜ್ನ ತಾಯಿ ಇನ್ನೊಂದು ಕೋಣೆಯಲ್ಲಿದ್ದರು. ತಾಯಿಯ ಕಣ್ಣೆದುರೇ ಮಗಳು ಮತ್ತು ಸೊಸೆ ಸುಟ್ಟು ಕರಕಲಾಗಿದ್ದು, ಆಘಾತದ ನಂತರ ಆಕೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಸ್ಥಳೀಯರ ಪ್ರಕಾರ, ಸ್ಫೋಟದ ತೀವ್ರತೆಯಿಂದಾಗಿ ಸುತ್ತಮುತ್ತಲಿನ ಜನರು ಎಚ್ಚರವಾಗಿದ್ದು, ಜನರು ಏನಾಗಿದೆ ಎಂದು ಅರ್ಥಮಾಡಿಕೊಳ್ಳುವ ಹೊತ್ತಿಗೆ ಇಬ್ಬರೂ ಮೃತಪಟ್ಟಿದ್ದರು. ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಕೂಡಲೇ ಘಟನೆ ಕುರಿತು ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತರಾತುರಿಯಲ್ಲಿ ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು, ಸದ್ಯ ಕುಟುಂಬಸ್ಥರು ಯಾವುದೇ ಲಿಖಿತ ದೂರು ನೀಡಿಲ್ಲ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿದೆ. (ಏಜೆನ್ಸೀಸ್)