ವಿವೇಕ ವಾರ್ತೆ : ಕೋಲಾರದಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ತಂದೆಯೇ ಹೆತ್ತ ಮಗಳನ್ನು ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಯುವತಿ ರಮ್ಯಾ (19) ಎಂದು ತಿಳಿದುಬಂದಿದೆ.
ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಮಗಳು ರಮ್ಯಾಳನ್ನು ತಂದೆ ವೆಂಕಟೇಶಗೌಡ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಎಷ್ಟೇ ಬುದ್ದಿವಾದ ಹೇಳಿದರೂ ಕೇಳದೇ ಯುವಕನೊಂದಿಗೆ ಹೋಗಿದ್ದ ಮಗಳನ್ನು ಹತ್ಯೆ ಮಾಡಲಾಗಿದೆ.
ಆಗಸ್ಟ್ 25ರಂದು ಮಗಳ ಹತ್ಯೆ ಮಾಡಿದ ಬಳಿಕ ಸದ್ದಿಲ್ಲದೆ ಹೆತ್ತವರು ಆಕೆಯ ಅಂತ್ಯಸಂಸ್ಕಾರ ಮುಗಿಸಿದ್ದರು. ಬಳಿಕ ಊರಿನಲ್ಲಿ ಯುವತಿಯ ಕೊಲೆ ಮಾಡಿರುವ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಪೊಲೀಸರು ಆಕೆಯ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಮರ್ಯಾದಾ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ.
ಭಾನುವಾರ (ಆ. 27) ಬೆಳ್ಳಂಬೆಳಿಗ್ಗೆ ತಹಶೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಯುವತಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರಿಂದ ತಂದೆ ವೆಂಕಟೇಶಗೌಡ, ಮೋಹನ್ ಮತ್ತು ಚೌಡೇಗೌಡ ಎಂಬುವರನ್ನು ಬಂಧಿಸಲಾಗಿದೆ.
ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.