ವಿವೇಕವಾರ್ತೆ : ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಇಳಿದಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಪೊಲೀಸ್ ಕಾನ್ಸ್ಟೇಬಲ್ ಬೆಂಗಳೂರು ಏರ್‌ಪೋರ್ಟ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯಲ್ಲಪ್ಪ ಎಂದು ತಿಳಿದುಬಂದಿದೆ.
ಯಲ್ಲಪ್ಪ, ಈ ಹಿಂದೆ ಬನಶಂಕರಿ ಠಾಣೆಯ ಕ್ರೈಂ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಇನ್ನುಪ್ರಕರಣವೊಂದರ ಆರೋಪಿಗಳ ವಿಚಾರಣೆ ವೇಳೆ ಯಲ್ಲಪ್ಪನ ಪಾತ್ರವಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದರಿಂದ ಆತನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಲಾಗಿತ್ತು.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಪ್ಪನ ವಿರುದ್ಧ ಚಾರ್ಜ್ಶೀಟ್ ಸಹ ಸಲ್ಲಿಕೆಯಾಗಿತ್ತು. ಆದರೆ ಇದ್ಯಾವುದಕ್ಕೋ ತಲೆಕೆಡಿಸಿಕೊಳ್ಳದೇ ಯಲ್ಲಪ್ಪ ಮತ್ತೆ ಹಳೆಚಾಳಿ ಮುಂದುವರೆಸಿದ್ದ.
ಚಂದ್ರಾ ಲೇಔಟ್, ಜ್ಞಾನಭಾರತಿ ಹಾಗೂ ಚಿಕ್ಕಜಾಲ ವ್ಯಾಪ್ತಿಯಲ್ಲಿ ಯಲ್ಲಪ್ಪ ಮನೆಗಳ್ಳರಿಗೆ ಸಾಥ್ ನೀಡಿರುವುದು ಗೊತ್ತಾಗಿದೆ. ಸದ್ಯ ಆರೋಪಿಯ ಕೃತ್ಯ ಬಯಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಜ್ಞಾನಭಾರತಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.