ವಿವೇಕ ವಾರ್ತೆ : ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರವಾಗಿ ಖಾಸಗಿ ವ್ಯಕ್ತಿಯೋರ್ವ 3.5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಟ್ಟಡವೊಂದಕ್ಕೆ 23 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 3.5 ಲಕ್ಷ ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್-1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಧನಂಜಯ ವಿ. ಬೇಡಿಕೆ ಇಟ್ಟಿದ್ದರು.
ಅವರ ಪರವಾಗಿ ಹಣ ಪಡೆದ ಸೈಯದ್ ನಿಜಾಮ್ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಭರತ್ ಕುಮಾರ್ ಎನ್.ಎಂ. ಎಂಬ ಎಲೆಕ್ಟ್ರಿಕ್ ಕಾಮಗಾರಿಗಳ ಗುತ್ತಿಗೆದಾರ, ಕಟ್ಟಡವೊಂದಕ್ಕೆ 23 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕೋರಿ ಬೆಸ್ಕಾಂನ ಜಯನಗರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ನೀಡಲು ₹ 13 ಲಕ್ಷ ಲಂಚ ನೀಡುವಂತೆ ಧನಂಜಯ ಬೇಡಿಕೆ ಇಟ್ಟಿದ್ದರು. ₹ 3.5 ಲಕ್ಷವನ್ನು ಬುಧವಾರವೇ ತಲುಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಹೀಗಾಗಿ ಭರತ್ ಕುಮಾರ್ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಸಂಜೆ 4 ಗಂಟೆಗೆ ಕಚೇರಿಯಲ್ಲಿ ದೂರುದಾರರು ಲಂಚದ ಹಣದೊಂದಿಗೆ ಧನಂಜಯ ಅವರ ಬಳಿ ಹೋಗಿದ್ದರು. ಈ ವೇಳೆ ಅಧಿಕಾರಿ ಅಲ್ಲಿಯೇ ಇದ್ದ ಸೈಯದ್ ನಿಜಾಮ್ ಅವರಿಗೆ ಕೊಡಿ ಎಂದು ಸೂಚನೆ ನೀಡಿದ್ದರು.
ಅದರಂತೆಯೇ ಭರತ್ ಕುಮಾರ್ ಹಣವನ್ನು ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಧನಂಜಯ ಮತ್ತು ಸೈಯದ್ ನಿಜಾಮ್ ಇಬ್ಬರನ್ನೂ ಬಂಧಿಸಿದ್ದಾರೆ.