ವಿವೇಕ ವಾರ್ತೆ : ಮುಂಬರುವ ವಿಧಾನಸಭೆ ಚುನಾವಣೆಗೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಟಿಕೆಟ್ ನಿರಾಕರಿಸಿದ ಹಿನ್ನೆಲೆ ತೆಲಂಗಾಣ ಮಾಜಿ ಉಪಮುಖ್ಯಮಂತ್ರಿ ತಾಟಿಕೊಂಡ ರಾಜಯ್ಯ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
ಸ್ಟೇಷನ್ ಘನಪುರದ ಹಾಲಿ ಶಾಸಕರಾದ ರಾಜಯ್ಯ ಅವರಿಗೆ ಟಿಕೆಟ್ ನಿರಾಕರಿಸಿ ಮತ್ತೋರ್ವ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಮುಖಂಡ ಕದಿಯಂ ಶ್ರೀಹರಿ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ವರದಿಯಾಗಿದೆ.
ತಮ್ಮ ಕ್ಷೇತ್ರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂದೆ ಮಂಡಿಯೂರಿ ಕುಳಿತ ರಾಜಯ್ಯ ಭಾವೋದ್ವೇಗಕ್ಕೆ ಒಳಗಾದರು. ತಮ್ಮ ಕಚೇರಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಮುಖ್ಯಸ್ಥರ ನಿರ್ದೇಶನವನ್ನು ಪಾಲಿಸುವುದಾಗಿ ತಿಳಿಸಿದರು.
ರಾಜಯ್ಯ ಅವರು 2009 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2014 ರಲ್ಲಿ ತೆಲಂಗಾಣ ರಚನೆಯ ಬಳಿಕ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅವರಿಗೆ ಆರೋಗ್ಯ ಖಾತೆ ನೀಡಲಾಗಿತ್ತು. ಆದರೆ, ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ 2015ರಲ್ಲಿ ರಾಜಯ್ಯ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು. ಅಂದಿನಿಂದ ರಾಜಯ್ಯ ಅವರನ್ನು ಪಕ್ಷದಿಂದ ದೂರವಿಡಲಾಗಿತ್ತು ಎನ್ನಲಾಗಿದೆ.
ಆದರೆ, 2018ರಲ್ಲಿ ಅವರಿಗೆ ಅದೇ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡಲಾಯಿತು. ಅವರು ಆ ಸ್ಥಾನವನ್ನು ಉಳಿಸಿಕೊಂಡರು. ಆದರೆ ಈ ಬಾರಿ, ತಮ್ಮದೇ ಪಕ್ಷದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಕಳೆದ ಕೆಲವು ವಾರಗಳಿಂದ ಕ್ಷೇತ್ರದಲ್ಲಿ ರಾಜಯ್ಯ ಮತ್ತು ಶ್ರೀಹರಿ ಗುಂಪಿನ ನಡುವೆ ತೀವ್ರ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಇಬ್ಬರೂ ನಾಯಕರು ಪಕ್ಷದ ಟಿಕೆಟ್‌ಗಾಗಿ ಒತ್ತಾಯಿಸುತ್ತಿದ್ದರು.