ವಿವೇಕವಾರ್ತೆ : ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದ ಬಸ್ ನಿಲ್ದಾಣದ ಸಮೀಪ ಹಾಡಹಗಲೇ ಗ್ರಾ. ಪಂ. ಅಧ್ಯಕ್ಷನ ಬರ್ಬರ ಹತ್ಯೆ ನಡೆದಿದೆ.
ಕೊಲೆಯಾದ ವ್ಯಕ್ತಿ ಮದರಾ(ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಪಾಟೀಲ್ ಎಂದು ತಿಳಿದುಬಂದಿದೆ.
ಚೌಡಾಪುರ ಬಸ್ ನಿಲ್ದಾಣದ ಬಳಿ ಗೌಡಪ್ಪಗೌಡ ಪಾಟೀಲ್ ನಿಂತಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಗೌಡಪ್ಪಗೌಡ ಇವರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಆದರೂ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದಾರೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಮಾಡಿದ ಹಂತಕರ ಹುಡುಕಾಟ ನಡೆಸಿದ್ದಾರೆ.