ವಿವೇಕ ವಾರ್ತೆ : ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸುರಂಗ ಮಾರ್ಗದ (ರಾ.ಹೆ 50) ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬ ಏಳು ಜನ ಸ್ಥಳದಲ್ಲಿ ಮೃತಪಟ್ಟಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ನಡೆದಿದೆ.
ಮೃತ ದುರ್ದೈವಿಗಳು ನಗರದ ಉಕ್ಕಡಕೇರಿ ನಿವಾಸಿಗಳಾದ ಗೋಣಿಬಸಪ್ಪ (65), ಬೀಮಲಿಂಗ (50), ಯುವರಾಜ (4) ಅನಿಲ್ (30), ಭಾಗ್ಯ (32) ಕೆಂಚವ್ವ (80) ಉಮಾ (45) ಎಂದು ತಿಳಿದುಬಂದಿದೆ.
ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೂಲಹಳ್ಳಿ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಕ್ರೂಸರ್ ವಾಹನದಲ್ಲಿ ತೆರಳಿ ವಾಪಸ್ಸಾಗುವಾಗ ಟಿಪ್ಪರ್ ಲಾರಿಯೊಂದು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಮೃತರೆಲ್ಲ ಹೊಸಪೇಟೆಯ ಉಕ್ಕಡಕೇರಿಯವರು. ಇವರು ಮಗುವಿನ ಜವಳ ತೆಗೆಸುವ ಸಲುವಾಗಿ ಕುಟುಂಬ ಸಮೇತ ಹರಪನಹಳ್ಳಿ ತಾಲ್ಲೂಕಿನ ಕೂಲಳ್ಳಿ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುತ್ತಿದ್ದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿನಯ್ (3) ಎಂಬ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕ್ರೂಸರ್ ವಾಹನವು ಪೂರ್ತಿ ಛಿದ್ರ ಛಿದ್ರಗೊಂಡಿದೆ. ಲಾರಿ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಕಳಚಿ ಬಿದ್ದಿದೆ.
