ವಿವೇಕವಾರ್ತೆ – ಲೋಕಾಯುಕ್ತ ಡಿವೈಎಸ್ಪಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರದ ಸಂತೋಷ್ ಕೊಪ್ಪದ್ ಬಂಧಿತ. ಇತ್ತೀಚಿಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಕರೆ ಮಾಡಿ ವಿಶಾಲ್ ಪಾಟೀಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಈ ಬಗ್ಗೆ ಲೋಕಾಯುಕ್ತ ಪೊಲೀಸರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಈ ಕೃತ್ಯದ ಪ್ರಮುಖ ಆರೋಪಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ್ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ರಿಮಿನಲ್ ಹಿನ್ನಲೆಯುಳ್ಳ ವಿಶಾಲ ಪಾಟೀಲ್, ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ. ಈ ಹಿಂದೆ ಸಹ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಹೆಸರಿನಲ್ಲಿ ಬ್ಲಾೃಕ್‌ಮೇಲ್ ಮಾಡಿದ್ದ ಸಂಬಂಧ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಾದ ಮೇಲೂ ಚಾಳಿಯನ್ನು ಮುಂದುವರಿಸಿದ್ದ. ಇನ್ನು ವಿಶಾಲ ಶಿಷ್ಯ ಸಂತೋಷ್ ಕೊಪ್ಪದ್ ಸಹ ಕ್ರಿಮಿನಲ್ ಹಿನ್ನಲೆಯುವಳ್ಳನಾಗಿದ್ದಾನೆ. ನ್ಯಾಯಾಲಯಕ್ಕೆ ಹಳೇ ಪ್ರಕರಣದ ವಿಚಾರಣೆಗೆ ಬಂದಾಗ ಪಾಟೀಲ್ ಮತ್ತು ಸಂತೋಷ್ ಪರಿಚಿತರಾಗಿದ್ದರು. ತರುವಾಯ ಜಂಟಿಯಾಗಿ ಸುಲಿಗೆಗೆ ಇಳಿದಿದ್ದರು. ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ವಿಶಾಲ್ ಪಾಟೀಲ್, ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮವಿರುದ್ಧ ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಸಂಬಂಧಪಟ್ಟ ಕಡತ ಸಂಗ್ರಹಿಸಲಾಗಿದೆ. ಮುಚ್ಚಿಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ಲೋಕಾಯುಕ್ತದಲ್ಲಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಬೆದರಿಸುತ್ತಿದ್ದ.
ಕೆಲ ದಿನಗಳ ಹಿಂದೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ವಿಶಾಲ್ ಪಾಟೀಲ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗೆ ಲೋಕಾಯುಕ್ತ ಪೊಲೀಸರಿಗೆ ಇಂಜಿನಿಯರ್‌ಗಳು ದೂರು ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಪೊಲೀಸರು, ವಿಚಾರಣೆ ನಡೆಸಿದಾಗ ಲೋಕಾಯುಕ್ತ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿತ್ತು.
ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ದೂರು ಸಲ್ಲಿಸಿದರು. ಇದರ ಅನ್ವಯ ತನಿಖೆ ನಡೆಸಿದ ಪೊಲೀಸರು, ಹಣ ಕೊಡುವುದಾಗಿ ವಿಶಾಲ್‌ಗೆ ಕರೆ ಮಾಡಿದ್ದರು. ತನ್ನ ಬದಲಿಗೆ ಹಣ ಸ್ವೀಕರಿಸಲು ಸಂತೋಷ್‌ನನ್ನು ಕಳುಹಿಸಿದ್ದ. ಹಣ ಪಡೆಯಲು ಬಂದಾಗ ಕೊಪ್ಪದ್ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.