ವಿವೇಕವಾರ್ತೆ : ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಕೊರವ ಸಮಾಜದ ಮಹಿಳೆಯೊಬ್ಬರು ಮೃತಪಟ್ಟು 15 ಗಂಟೆಗಳಾದರೂ ಸಹ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನ ಭೂಮಿ ಇಲ್ಲದೇ ಪರದಾಡುತ್ತಿದ್ದು, ಸಮಾಜದಲ್ಲಿ ಜನರು ಗ್ರಾಮ ಪಂಚಾಯತಿ ಮುಂದೆ ಜಮಾಯಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಳೇಭಾವಿ ಗ್ರಾಮದಲ್ಲಿ ತಲೆತಲಾಂತರದಿಂದ ಕೊರವ ಸಮಾಜಕ್ಕೆ ಮೀಸಲಿಟ್ಟಿರುವ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಮಶಾನ ಜಾಗ ಇದ್ದರೂ ಖಾಸಗಿಯವರು ಈ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ನಮಗೆ ಸೂಕ್ತ ಜಾಗ ಇಲ್ಲದೇ ಅಂತ್ಯಕ್ರಿಯೆ ಎಲ್ಲಿ ನಡೆಸುವುದು. ಜಾಗ ಗುರುತಿಸಿ ಕೊಡಿ, ಇಲ್ಲದಿದ್ದರೆ ಪಂಚಾಯಿತಿ ಮುಂದೆಯೇ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ಕೊರವ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ನಮ್ಮ ಸಮಾಜ ಇತರೆ ಸಮುದಾಯಕ್ಕಾಗಿ 10 ಗುಂಟೆ ಸ್ಮಶಾನ ಜಾಗವಿದೆ. ಆದರೆ ಈಗ ಜಾಗವೇ ಅಲ್ಲಿ ಇಲ್ಲ, ಬೇರೆಯವರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಅತಿಕ್ರಮಣ ಮಾಡಿಕೊಂಡವರ ಜೊತೆ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಸಹ ಆರೋಪಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಬಂದು ನಮಗೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ಮೃತದೇಹದ ಅಂತ್ಯಸಂಸ್ಕಾರ ಇಲ್ಲಿಯೇ ನೇರವೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.