ವಿವೇಕವಾರ್ತೆ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದೆ. ಹೌದು, ಸ್ನೇಹಿತನನ್ನೇ ಕೊಲೆ ಮಾಡಿ, ರುಂಡದೊಂದಿಗೆ ಊರಿಗೆ ಬಂದ ಘಟನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಸ್ನೇಹಿತನನ್ನೇ ಕೊಂದು ರುಂಡದೊಂದಿಗೆ ಊರಿಗೆ ಬಂದ ಘಟನೆ ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ (Harugeri) ಪಟ್ಟಣದ ಹೊರವಲಯದ ಬಡಬ್ಯಾಕೂಡ್ ಗ್ರಾಮದಲ್ಲಿ ನಡೆದಿದೆ. ಅಕ್ಬರ್ ಜಮಾದಾರ್ (21) ಕೊಲೆಯಾದ ವ್ಯಕ್ತಿ. ಆರೋಪಿ ಮಹಾಂತೇಶ ಪೂಜಾರ್(23) ಬಸ್ತವಾಡ ಬಳಿಯ ಅರಣ್ಯದಲ್ಲಿ ಸ್ನೇಹಿತನನ್ನು ಹತ್ಯೆಮಾಡಿ, ಬಳಿಕ ರುಂಡದ ಜೊತೆ ಗ್ರಾಮಕ್ಕೆ ಬಂದಿದ್ದ. ಇದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಮೇರೆಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹಾಂತೇಶ್ನನ್ನು ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಮಾಡುತ್ತಿದ್ದ ಇಬ್ಬರೂ ಸ್ನೇಹಿತರು
ಹೌದು, ಕೊಲೆಯಾದ ಅಕ್ಬರ್ ಮತ್ತು ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದು, ಜೊತೆಗೆ ಇಬ್ಬರೂ ಸೇರಿ ಎಮ್ಮೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಇವರ ವಿರುದ್ಧ ಹಾರೂಗೇರಿ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಇಂತಹ ಕುಚಿಕು ಗೆಳೆಯನನ್ನೇ ಇದೀಗ ಕೊಲೆ ಮಾಡಿದ್ದಾನೆ. ಮಾಹಿತಿ ಪ್ರಕಾರ ಇಬ್ಬರ ನಡುವೆ ಹಣದ ವಿಷಯವಾಗಿ ಗಲಾಟೆಯಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಆದರೆ, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆ ಬಳಿಕ ಗೊತ್ತಾಗಲಿದೆ.
ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಮೃತನ ಪೋಷಕರ ಆಕ್ರಂದನ
ಇಬ್ಬರು ಅಷ್ಟೊಂದು ಸಲುಗೆಯಿಂದ ಇದ್ದು, ಜೀವಕ್ಕೆ ಜೀವ ಎನ್ನುತ್ತಿದ್ದ ಗೆಳೆಯನನ್ನೇ ಕೊಲೆ ಮಾಡಿದ್ದು, ಮೃತನ ಪೋಷಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಅಕ್ಬರ್ ಮೃತದೇಹ ಸ್ಥಳಾಂತರ ಮಾಡಲಾಗಿದ್ದು, ಆಸ್ಪತ್ರೆ ಬಳಿ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.