ಬೆಳಗಾವಿಯಲ್ಲೇ 10 ದಿನ ಚಳಿಗಾಲದ ಅಧಿವೇಶನ (Belagavi Winter Session) ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದ್ದು, ಅಂತಿಮವಾಗಿ ಕ್ಯಾಬಿನೆಟ್ ನಿಗದಿಪಡಿಸಿದ ದಿನಗಳವರೆಗೆ ಅಧಿವೇಶನ ನಡೆಸಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದ್ದಾರೆ.
ಧಾರವಾಡದಲ್ಲಿ (Dharawada) ಮಾತನಾಡಿದ ಅವರು, ಅಧಿವೇಶನದ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಕ್ಯಾಬಿನೆಟ್‌ನಲ್ಲಿ ಸಿಎಂ ನಿರ್ಧರಿಸಿ ಹೇಳಬೇಕಿದೆ. ಅದಕ್ಕಾಗಿ ನಾವೂ ಕಾಯುತ್ತಿದ್ದೇವೆ. 10 ದಿನ ಅಧಿವೇಶನ ಮಾಡಬಹುದು ಎಂದು ಚರ್ಚೆ ಮಾಡಲಾಗಿದೆ ಎಂದಿದ್ದಾರೆ.
ಅಧಿವೇಶನಕ್ಕೆ 10 ದಿನ ಸಾಕಾಗುವುದಿಲ್ಲ. ಚರ್ಚೆ ಮಾಡಲು ಸಮಯ ಸಾಕಾಗುವುದಿಲ್ಲ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರು ಅಧಿವೇಶನ ಹೆಚ್ಚು ದಿನ ನಡೆಸಲು ಮನವಿ ಮಾಡಿದ್ದಾರೆಂದು ಸರ್ಕಾರಕ್ಕೆ ಹೇಳುತ್ತೇನೆ. ಕೊನೆಗೆ ಸರ್ಕಾರ ಕ್ಯಾಬಿನೆಟ್‌ನಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದರಂತೆ ಮಾಡುತ್ತೇವೆ. ಈ ಬಾರಿಯ ಅಧಿವೇಶನವನ್ನು ಒಳ್ಳೆಯದಾಗಿ ಮಾಡೋಣ ಎಂದು ಹೇಳಿದ್ದಾರೆ.