ವಿವೇಕವಾರ್ತೆ : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ಪ್ರಿಯತಮನ ಕೊಲೆ ಬೆದರಿಕೆ ಹಾಗೂ ವಂಚನೆಗೆ ನೊಂದ ಕಾಲೇಜು ವಿಷ ಸೇವಿಸಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾಲೇಜು ವಿದ್ಯಾರ್ಥಿನಿ ಆಶಾ (20) ಎಂಬಾಕೆ ಮೃತಪಟ್ಟಿದ್ದಾಳೆ.
ಆಶಾ ದ್ವಿತೀಯ ಬಿಕಾಂ ಓದುತ್ತಿದ್ದು, ಮಂಜುನಾಥ್ ಕೂಡ ಆಕೆ ಓದುತ್ತಿದ್ದ ಕಾಲೇಜಿನ ದ್ವಿತೀಯ ಬಿಎ ಓದುತ್ತಿದ್ದನು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು.
ಆದರೆ ಈ ನಡುವೆ ಮಂಜುನಾಥ್ ಬೇರೊಂದು ಹುಡುಗಿಯ ಸಹವಾಸ ಮಾಡಿದ್ದ. ಆಕೆಯೊಂದಿಗೆ ಸುತ್ತಾಡುತ್ತಿದ್ದ. ಇದರಿಂದ ಸಿಟ್ಟಾದ ಆಶಾ, ಮಂಜುನಾಥನ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಈ ವೇಳೆ ಮಂಜುನಾಥ್ ನನ್ನೊಂದಿಗೆ ನೀನು ಸುತ್ತಾಡಿರುವ ಫೋಟೊ, ಮೆಸೇಜ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಇದರಿಂದ ಮನನೊಂದ ಆಶಾ ಕಾಲೇಜಿನ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಮಂಜುನಾಥ್ ಆಶಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಆಶಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಶಾ ಪೋಷಕರು ಮಂಜುನಾಥನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬೇಲೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.