ವಿವೇಕ ವಾರ್ತೆ : ನಗರದ ಮೂಡಲಪಾಳ್ಯದಲ್ಲಿ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಅತ್ತೆಗೆ ಕರೆ ಮಾಡಿದ ಬಳಿಕ ವ್ಯಕ್ತಿಯೋರ್ವ ಚಂದ್ರಲೇಔಟ್ ಠಾಣೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ಮೂಡಲಪಾಳ್ಯ ಸಮೀಪದ ಶಿವಾನಂದ ನಗರದ ಗೀತಾ (33) ಅವರನ್ನು ಹತ್ಯೆ ಮಾಡಿ ಬಳಿಕ ಪತಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.
ಇಬ್ಬರಿಗೂ ಮದುವೆಯಾಗಿ 13 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹೊಸೂರಿನಲ್ಲಿ ನೆಲೆಸಿರುವ ಗೀತಾ ಅವರ ತಾಯಿ ರತ್ನಮ್ಮ ಮಗಳನ್ನು ಭೇಟಿ ಮಾಡಿ ಸಂಜೆ ವಾಪಸಾಗಿದ್ದರು. ಆದರೆ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ಶಂಕರ್ ಅತ್ತೆಗೆ ಕಾಲ್ ಮಾಡಿ ಗೀತಾಳನ್ನು ಕೊಂದಿರುವುದಾಗಿ ತಿಳಿಸಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಆರೋಪಿ, ಗೀತಾ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೆಲ ದಿನಗಳಿಂದ ಪರಪರುಷನ ಜತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದ ಶಂಕರ್, ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಂತೆಯೇ ಬುಧವಾರ ರಾತ್ರಿ ಸಹ ಸತಿ-ಪತಿ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.