ಆನ್‌ಲೈನ್ ಮಯವಾಗಿರುವ ಇಂದಿನ ಕಾಲದಲ್ಲಿ ಮಾಹಿತಿ ಎಲ್ಲೆಲ್ಲಿಂದಲೋ ಹರಿದುಬರುತ್ತವೆ. ಬಿಲ್ ಪಾವತಿಗಳಿಂದ ಹಿಡಿದು ಸಿನಿಮಾ ನೋಡುವವರೆಗೂ ಆನ್‌ಲೈನ್‌ನಲ್ಲೇ ಬಹುತೇಕ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಉದ್ಯೋಗಸ್ಥಳವೇ ಬಹುತೇಕ ಆನ್‌ಲೈನ್ ಆಗಿಹೋಗಿದೆ. ಹೀಗಾಗಿ, ನಮ್ಮ ದೈನಂದಿನ ಜೀವನ ಆನ್‌ಲೈನ್‌ನಲ್ಲಿ ತೆರೆದೇ ಇರುತ್ತದೆ.
ಇಂಥ ಪರಿಸ್ಥಿತಿಯಲ್ಲಿ ಸೈಬರ್ ಕ್ರೈಮ್‌ಗಳೂ ಹೆಚ್ಚುತ್ತಿವೆ. ಅದರಲ್ಲೂ ಸೈಬರ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ.
ಫಿಶಿಂಗ್ ಮೆಸೇಜ್‌ಗಳು, ನಕಲಿ ಐಡಿ, ಬ್ಲ್ಯಾಕ್‌ಮೇಲಿಂಗ್ ಇತ್ಯಾದಿ ನಡೆಯುತ್ತಲೇ ಇರುತ್ತವೆ. ಆನ್‌ಲೈನ್‌ನಲ್ಲಿ ನಕಲಿ ವೆಬ್‌ಸೈಟ್‌ಗಳು ಜನರನ್ನು ಏಮಾರಿಸುತ್ತವೆ. ಮೊಬೈಲ್‌ನಲ್ಲಿ ಜನರಿಗೆ ಅನುಮಾನ ಬರದ ರೀತಿಯಲ್ಲಿ ನಕಲಿ ಆಯಪ್‌ಗಳು ಡೌನ್‌ಲೋಡ್ ಆಗಿ ಮಾಹಿತಿ ಕದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಇನ್ನೂ ಕೆಲ ಸೈಬರ್ ವಂಚಕರು ಜನರಿಗೆ ಕರೆ ಮಾಡಿ ತಾವು ಇಂಥ ಬ್ಯಾಂಕ್ ಅಥವಾ ಇಂಥ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಕೆವೈಸಿ ಇತ್ಯಾದಿ ವಿವರ ಭರ್ತಿ ಮಾಡುವ ನೆಪದಲ್ಲಿ ಆಧಾರ್, ಕ್ರೆಡಿಟ್ ಕಾರ್ಡ್ ನಂಬರ್, ಒಟಿಪಿ ಇತ್ಯಾದಿಯನ್ನು ಕೇಳಿ ಪಡೆಯುತ್ತಾರೆ. ಅದು ಕೊಟ್ಟೀರೋ ಮುಗಿಯಿತು ಕಥೆ…!
ಎಸ್‌ಬಿಐ ಹೆಸರಲ್ಲಿ ನಕಲಿ ಮೆಸೇಜ್
ಇತ್ತೀಚೆಗೆ ಹಲವು ಜನರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೆಸರಲ್ಲಿ ಸಂಶಯಾಸ್ಪದ ಸಂದೇಶವೊಂದು ಹರಿದಾಡುತ್ತಿದೆ. ಜನರು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಪಾನ್ ನಂಬರ್ ಅನ್ನು ಅಪ್‌ಡೇಟ್ ಮಾಡಬೇಕೆಂದು ಈ ಮೆಸೇಜ್ ಬರುತ್ತಿದೆ. ನೀವು ಪ್ಯಾನ್ ನಂಬರ್ ಅಪ್‌ಡೇಟ್ ಮಾಡಲಿಲ್ಲವೆಂದರೆ ಎಸ್‌ಬಿಐ ಖಾತೆಯನ್ನು ಮುಚ್ಚಲಾಗುವುದು ಎಂದು ಸಂದೇಶದಲ್ಲಿ ಬರೆಯಲಾಗಿದೆ. ಜೊತೆಗೆ ಲಿಂಕ್ ಆಗಿ ಒಂದು ಶಾರ್ಟ್ ಯುಆರ್‌ಎಲ್ ಹಾಕಲಾಗಿದೆ.
ಇದು ಫಿಶಿಂಗ್ ದಾಳಿ. ಅಂದರೆ ಇದರಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಯಾವುದೋ ಅಪಾಯಕಾರಿ ತಾಣಕ್ಕೆ ಕರೆದೊಯ್ಯುತ್ತದೆ, ಅಥವಾ ಅಪಾಯಕಾರಿ ಫೈಲ್ ನಿಮ್ಮ ಸಿಸ್ಟಂಗೆ ಡೌನ್‌ಲೋಡ್ ಆಗುತ್ತದೆ.
ಪಿಐಬಿ ರಿಯಾಕ್ಷನ್
ಸರ್ಕಾರದ ಪಿಐಬಿ ಸಂಸ್ಥೆ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಪಂದಿಸಿದ್ದು, ಈ ಫಿಶಿಂಗ್ ಮೆಸೇಜ್ ಬಗ್ಗೆ ಜಾಗ್ರತೆ ಇರುವಂತೆ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಈ ಮೆಸೇಜ್‌ನ ಸ್ಕ್ರೀನ್ ಶಾಟ್ ಅನ್ನು ಉದಾಹರಣೆಯಾಗಿ ಇಟ್ಟು, ಇದು ಸಂಪೂರ್ಣ ನಕಲಿ ಎಂದು ಸ್ಪಷ್ಟಪಡಿಸಿದೆ.
ಎಸ್‌ಬಿಐನಿಂದ ಇಂಥ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ. ಪ್ಯಾನ್ ನಂಬರ್ ಅಪ್‌ಡೇಟ್ ಮಾಡಬೇಕೆಂದು ಕೇಳಲಾಗಿಲ್ಲ. ಮೆಸೇಜ್‌ಗಳ ಮೂಲಕ ಎಸ್‌ಬಿಐ ತನ್ನ ಗ್ರಾಹಕರಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ. ಹಾಗಾಗಿ ಜಾಗ್ರತೆಯಿಂದ ಇರಬೇಕೆಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ತನ್ನ ಫ್ಯಾಕ್ಟ್ ಚೆಕ್‌ನಲ್ಲಿ ತಿಳಿಸಿದೆ.
A #Fake message issued in the name of SBI is asking customers to update their PAN number to avoid their account from getting blocked#PIBFactCheck
▶️Never respond to emails/SMS asking to share your personal or banking details
▶️Report at👇
✉️ report.phishing@sbi.co.in
📞1930 pic.twitter.com/lYpXTln4qT
— PIB Fact Check (@PIBFactCheck) November 4, 2022
ಎಸ್‌ಬಿಐ ಸ್ಪಂದನೆ
ಇದೇ ವೇಳೆ ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಗ್ರಾಹಕರಿಗೆ ಫಿಶಿಂಗ್ ದಾಳಿಯಿಂದ ಬಚಾವಾಗುವ ಕೆಲ ಸಲಹೆಗಳನ್ನು ಮುಂದಿಟ್ಟಿದೆ. ನಿಮಗೆ ಅನುಮಾನವೆನಿಸುವ ಇ ಮೇಲ್ ಅಥವಾ ಫೋನ್ ಕಾಲ್ ಅಥವಾ ಎಸ್ಸೆಮ್ಮೆಸ್ ಅಥವಾ ಲಿಂಕ್ ಬಂದಲ್ಲಿ ಜಾಗ್ರತೆಯಿಂದಿರಿ ಎಂದು ಹೇಳಿರುವ ಎಸ್‌ಬಿಐ, ಸೈಬರ್ ಕ್ರೈಮ್ ವಿರುದ್ಧ ದೂರು ನೀಡಲು ಎಂಬ ಲಿಂಕ್ ಕೊಟ್ಟಿದೆ.
ನಿಮ್ಮ ಕ್ರೆಡಿಟ್ ರಿಪೋರ್ಟ್‌ಗಳನ್ನು ಆಗಾಗ ಪರಿಶೀಲಿಸುತ್ತಿರಿ. ನಿಮ್ಮ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್‌ಗಳನ್ನು ಆಗಾಗ ಗಮನಿಸುತ್ತಿರಿ ಎಂದು ಎಸ್‌ಬಿಐ ಹೇಳಿದೆ.
ಯಾರೇ ಅಪರಿಚಿತರು ಫೋನ್ ಮಾಡಿ ಕೇಳಿದರೂ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆಯ ನಿಮ್ಮ ವಿವರ, ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿ ಇತ್ಯಾದಿಯನ್ನು ಹಂಚಿಕೊಳ್ಳಬೇಡಿ. ಅನುಮಾನ ಎನಿಸುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಲೇಬೇಡಿ. ಅಪರಿಚಿತರಿಂದ ಬಂದ ಇಮೇಲ್‌ನಲ್ಲಿರುವ ಅಟ್ಯಾಚ್ಮೆಂಟ್ ಅನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸದಿರಿ. ನಿಮಗೆ ಖಾತ್ರಿ ಇಲ್ಲದ ಸಂದೇಶವನ್ನು ಇನ್ನೊಬ್ಬರಿಗೆ ಹಂಚಿಕೊಳ್ಳಬೇಡಿ ಎಂಬಿತ್ಯಾದಿ ಸಲಹೆ ಸೂಚನೆಗಳನ್ನು ಎಸ್‌ಬಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.