ವಿವೇಕ ವಾರ್ತೆ : 10 ದಿನಗಳಿಂದ ನಾಪತ್ತೆಯಾಗಿದ್ದ ಮಹಾರಾಷ್ಟ್ರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಸನಾ ಖಾನ್ರನ್ನು ಅವರ ಪತಿ ಅಮಿತ್ ಸಾಹು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದೆಯಷ್ಟೆ ಸನಾ ಖಾನ್ ಹಾಗೂ ಅಮಿತ್ ಮದುವೆಯಾಗಿದ್ದರು. ಇನ್ನೂ ಹಣಕಾಸು ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಸು ಇದ್ದ ಕಾರಣ ಈ ಕೊಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗಂಡನನ್ನು ಭೇಟಿ ಮಾಡಿಕೊಂಡು ಬರುತ್ತೇನೆಂದು ಸನಾ, ಮಧ್ಯಪ್ರದೇಶದ ಜಬಲ್ಪುರಕ್ಕೆ ಹೋಗಿದ್ದರು. ಮೂರು ದಿನಗಳಾದರೂ ಮಗಳು ಮೊಬೈಲ್ ಕಾಲ್ ಸ್ವೀಕರಿಸದೆ ಇದ್ದಾಗ ಆತಂಕಗೊಂಡ ಆಕೆಯ ಪೋಷಕರು ನಾಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಜಬಲ್ಪುರ ಪೊಲೀಸರಿಗೆ ವಿಷಯ ತಿಳಿಸಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸನಾ ಖಾನ್ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೊಲೀಸರು ಸಂಶಯದ ಮೇಲೆ ಆಕೆಯ ಪತಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆರೋಪಿ ಕೊಲೆ ಮಾಡಿ ಆಕೆಯ ಮೃತದೇಹವನ್ನೂ ಜಬಲ್ಪುರದಿಂದ 45 ಕಿಲೋಮೀಟರ್ ದೂರದಲ್ಲಿರುವ ಹಿರಾನ್ ನದಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ.